ಪಾಕಿಸ್ತಾನ, 26(Daijiworld News/RD): 2022ರಲ್ಲಿ ಬಾಹ್ಯಾಕಾಶಕ್ಕೆ ಮೊದಲಬಾರಿಗೆ ಮಾನವನನ್ನು ಪಾಕಿಸ್ತಾನ ಕಳುಹಿಸಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಹೇಳಿದ್ದಾರೆ.
ಈ ಕುರಿತು ಟ್ವಿಟ್ ಮಾಡಿದ ಅವರು, ಪಾಕಿಸ್ತಾನವು ಬಾಹ್ಯಾಕಾಶಕ್ಕೆ ಇದೇ ಮೊದಲ ಬಾರಿಗೆ ಮಾನವನನ್ನು ಕಳುಹಿಸಲು ಮುಂದಾಗಿದೆ. ಈ ಪ್ರಕ್ರಿಯೆ ಫೆಬ್ರವರಿ 2020ರಿಂದ ಆರಂಭಗೊಳ್ಳಲಿದ್ದು, ಇದನ್ನು ಘೋಷಿಸುತ್ತಿರುವುದಕ್ಕೆ ಹೆಮ್ಮೆ ಆಗುತ್ತಿದೆ" ಎಂದು ಟ್ವೀಟರ್ನಲ್ಲಿ ಹೇಳಿದ್ದಾರೆ. ಮೊದಲ ಹಂತವಾಗಿ 50 ಜನರನ್ನು ಆಯ್ಕೆ ಮಾಡಲಾಗುತ್ತದೆ. ನಂತರ ಆ ಸಂಖ್ಯೆಯನ್ನು 25ಕ್ಕೆ ಇಳಿಸಲಾಗುವುದು. 2022ರಲ್ಲಿ ನಾವು ಪಾಕಿಸ್ತಾನದ ಮೊದಲ ವ್ಯಕ್ತಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದ್ದೇವೆ ಎಂದು ಹೇಳಿದ್ದಾರೆ.
ಈಗಾಗಲೇ ಪಾಕಿಸ್ತಾನ ವಾಯುಪಡೆಯ ಮೂಲಕ 50 ಜನರನ್ನು 2020 ರ ಫೆಬ್ರವರಿಯಲ್ಲಿ ಆಯ್ಕೆ ಮಾಡಲಾಗುವುದು. ಆ ನಂತರ ಅವರಿಗೆ ತರಬೇತಿ ನೀಡಿ, ಓರ್ವ ಗಗನಯಾತ್ರಿಯನ್ನು ಆಯ್ಕೆ ಮಾಡಲಾಗುವುದು. ನಂತರ ಆತನನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. ಹೀಗಾಗಿ ಈ ಯೋಜನೆಯು ವಿಶ್ವದ ಅತಿದೊಡ್ಡ ಬಾಹ್ಯಾಕಾಶ ಯೋಜನೆಯಾಗಲಿದೆ’ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಈಗಾಗಲೆ ಪಾಕಿಸ್ತಾನ ಆರ್ಥಿಕವಾಗಿ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಇದಕ್ಕೆ ಉದಾಹರಣೆಯಂತೆ ಕಳೆದ ಕೆಲವು ದಿನಗಳ ಹಿಂದೆ ವಿದೇಶಕ್ಕೆ ಪ್ರವಾಸ ಕೈಗೊಂಡ ಪ್ರಧಾನಿ ಇಮ್ರಾನ್ ಖಾನ್ ಕಡಿಮೆ ವೆಚ್ಚದಲ್ಲಿ ಸಂಚರಿಸಿದ್ದಾರೆ. ಖಾಸಗಿ ಜೆಟ್ನಲ್ಲಿ ಅಮೇರಿಕಕ್ಕೆ ಪ್ರಯಾಣಿಸಿದ್ದು, ಜೊತೆಗೆ ಪಾಕಿಸ್ತಾನದ ರಾಯಭಾರಿ ಗೃಹಕ್ಕೆ ಮೆಟ್ರೊದಲ್ಲಿ ಪ್ರಯಾಣ ಬೆಳೆಸಿದ್ದರು. ಈ ಎಲ್ಲಾ ಆರ್ಥಿಕ ಮುಗ್ಗಟ್ಟಿನ ನಡುವೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ 2022ರಲ್ಲಿ ಬಾಹ್ಯಾಕಾಶಕ್ಕೆ ಮೊದಲ ಬಾರಿಗೆ ಗಗನಯಾತ್ರಿಯನ್ನು ಕಳುಹಿಸಲು ತಯಾರಿಗೊಳಿಸುತ್ತಿರುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.