ಲಾಹೋರ್, ಜೂ 30 (Daijiworld News/RD): ಪಾಕಿಸ್ತಾನದಲ್ಲಿ 1000 ಕ್ಕೂ ಅಧಿಕ ವರ್ಷ ಪುರಾತನ ಐತಿಹಾಸಿಕ ಶಾವಾಲಾ ತೇಜ ಸಿಂಗ್ ದೇವಸ್ಥಾನವನ್ನು 72 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪೂಜಾ ಕಾರ್ಯಕ್ಕೆ ಮುಕ್ತ ಅವಕಾಶ ನೀಡಿದೆ. ಪಾಕಿಸ್ತಾನದ ಸಿಯಾಲ್ ಕೋಟ್ ನಗರದಲ್ಲಿ ಈ ದೇವಸ್ಥಾನವಿದ್ದು, ಕಳೆದ ಹಲವು ವರ್ಷಗಳ ಇತಿಹಾಸ ಈ ದೇವಾಲಯಕ್ಕಿದೆ. ಇದೀಗ ಹಲವು ದಶಕಗಳ ಬಳಿಕ ಮತ್ತೆ ಮೊದಲ ಬಾರಿಗೆ ಸಾರ್ವಜನಿಕರು ಈ ದೇವಾಲಯದಲ್ಲಿ ಪ್ರಾರ್ಥನೆ, ಪೂಜೆ ಸಲ್ಲಿಸಬಹುವುದು ಎಂದು ಹೇಳುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಸ್ಪಂದಿಸಿದ್ದಾರೆ.
ಭಾರತ ಸ್ವಾತಂತ್ರ್ಯ ಪಡೆದ ನಂತರ ಪಾಕಿಸ್ತಾನ ಭಾರತದಿಂದ ಬೇರ್ಪಟ್ಟಿದ್ದು ಈ ಘಟನೆ ನಡೆದ ಬಳಿಕ ಪಾಕಿಸ್ಥಾನ ಭಾರತವನ್ನು ದ್ವೇಷಿಸುತ್ತ ಬಂದಿದ್ದು, ಈ ದೇವಸ್ಥಾನಕ್ಕೆ ಪಾಕಿಸ್ತಾನ ಸರ್ಕಾರ ಬೀಗ ಹಾಕಿತ್ತು. ಹೀಗಾಗಿ ದೇವಾಲಯದ ಬೀಗ ತೆಗೆದು ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಇಲ್ಲಿನ ಹಿಂದೂಗಳು ಪಾಕಿಸ್ತಾನ ಸರ್ಕಾರದಲ್ಲಿ ಮನವಿಯನ್ನು ಇಟ್ಟಿದ್ದರು. ಇದನ್ನು ಕಡೆಗಣಿಸುತ್ತಾ ಬಂದಿತ್ತು. ಈ ಹಿಂದೆ ಇಲ್ಲಿ ಹಿಂದೂಗಳು ವಾಸವಿರದ ಕಾರಣಕ್ಕಾಗಿ ದೇವಸ್ಥಾನದ ಬಾಗಿಲನ್ನು ಬಂದ್ ಮಾಡಲಾಗಿತ್ತು ಎಂದು ಪಾಕ್ ಹೇಳುತ್ತಿತ್ತು.
1992ರಲ್ಲಿ ಭಾರತದಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ನಂತರ ಪಾಕ್ನಲ್ಲಿದ್ದ ಹಿಂದೂಗಳು ಶಾವಾಲಾ ತೇಜ ಸಿಂಗ್ ದೇಗುಲಕ್ಕೆ ಭೇಟಿ ನೀಡುವುದನ್ನು ನಿಲ್ಲಿಸಿದ್ದರು. ಅಂದಿನಿಂದ ದೇಗುಲದಲ್ಲಿ ಪೂಜೆ, ಪುರಸ್ಕಾರಗಳು ನಡೆಯದೆ ಪಾಳುಬಿದ್ದಿತ್ತು.
ಈ ಬಗ್ಗೆ ಸುದ್ದಿಸಂಸ್ಥೆಯೊಂದು ನೀಡಿದ ವರದಿಯ ಪ್ರಕಾರ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ನಿರ್ದೇಶನದ ಮೇರೆಗೆ ದೇವಾಲಯದ ಬಾಗಿಲನ್ನು ಮತ್ತೆ ತೆರೆಯಲಾಗಿದೆ ಎನ್ನಲಾಗಿದೆ. ಅಲ್ಲದೆ ಜನರು ಯಾವುದೇ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಲು ಮುಕ್ತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಬಿಲಾಲ್ ಹೈದರ್ ಹೇಳಿದ್ದಾರೆ.ಆದರೆ ಈಗ ಸುಮಾರು 2 ಸಾವಿರ ಮಂದಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ಇದೀಗ ದೇಗುಲದ ಬಾಗಿಲು ತೆರೆದು, ದೇವರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಹಿಂದೂಗಳು ಸಂತಸ ವ್ಯಕ್ತಪಡಿಸಿದ್ದಾರೆ.