ಪ್ಯೊಂಗ್ಯಾಂಗ್, ಮಾ. 18 (DaijiworldNews/T A): 2026ರ ಉತ್ತರ ಕೊರಿಯಾ ಚುನಾವಣೆಯಲ್ಲಿ ನಾಯಕ ಕಿಮ್ ಜಾಂಗ್ ಉನ್ ಭರ್ಜರಿ ಗೆಲುವು ಸಾಧಿಸಿದ್ದು, 99.93% ಮತಗಳನ್ನು ಪಡೆದು ಮತ್ತೊಮ್ಮೆ ಅಧಿಕಾರವನ್ನು ಬಿಗಿಗೊಳಿಸಿದ್ದಾರೆ. ಮಾರ್ಚ್ 15ರಂದು 15ನೇ ಸುಪ್ರೀಂ ಪೀಪಲ್ಸ್ ಅಸೆಂಬ್ಲಿಯ ಸದಸ್ಯರ ಆಯ್ಕೆಗೆ ಮತದಾನ ನಡೆದಿತ್ತು. ಕೊರಿಯಾದ ಕಾರ್ಮಿಕರ ಪಕ್ಷ ಹಾಗೂ ಅದರ ಮಿತ್ರಪಕ್ಷಗಳು ಒಟ್ಟು 99.97% ಮತಗಳನ್ನು ಪಡೆದು ಎಲ್ಲಾ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ.

ಈ ಚುನಾವಣೆಯಲ್ಲಿ ನೋಂದಾಯಿತ ಮತದಾರರಲ್ಲಿ 99.99% ಜನರು ಭಾಗವಹಿಸಿದ್ದು ಗಮನಾರ್ಹ. ಕೇವಲ 0.0037% ಜನರು ವಿದೇಶ ಅಥವಾ ಸಮುದ್ರದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಇನ್ನು 0.00003% ಜನರು ಮಾತ್ರ ಮತದಾನದಿಂದ ದೂರ ಉಳಿದಿದ್ದಾರೆ. ಮತ ಚಲಾಯಿಸಿದವರಲ್ಲಿ 99.93% ಜನರು ಅಭ್ಯರ್ಥಿಗಳನ್ನು ಬೆಂಬಲಿಸಿದರೆ, 0.07% ಜನರು ವಿರೋಧವಾಗಿ ಮತ ಚಲಾಯಿಸಿದ್ದಾರೆ. ಇದೇ ವಿರೋಧ ಮತಗಳ ಪ್ರಮಾಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಉತ್ತರ ಕೊರಿಯಾದ ಚುನಾವಣಾ ಕಾನೂನುಗಳ ಪ್ರಕಾರ ಕಾರ್ಮಿಕರು, ರೈತರು, ಬುದ್ಧಿಜೀವಿಗಳು, ಸೇವಾ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಒಳಗೊಂಡಂತೆ ಒಟ್ಟು 687 ಪ್ರತಿನಿಧಿಗಳನ್ನು ವಿಧಾನಸಭೆಗೆ ಆಯ್ಕೆ ಮಾಡಲಾಗಿದೆ. ಆದರೆ ಪ್ರತಿ ಕ್ಷೇತ್ರದಲ್ಲೂ ಕೇವಲ ಒಬ್ಬ ಅಭ್ಯರ್ಥಿಯೇ ಸ್ಪರ್ಧಿಸಿದ್ದರಿಂದ, ಹೊರಗಿನ ವೀಕ್ಷಕರು ಈ ಚುನಾವಣೆಯನ್ನು “ಪ್ರದರ್ಶನ ಚುನಾವಣೆ” ಎಂದು ಟೀಕಿಸಿದ್ದಾರೆ. ವಿಶೇಷವಾಗಿ, 1957ರ ನಂತರ ಮೊದಲ ಬಾರಿಗೆ ಸುಪ್ರೀಂ ಪೀಪಲ್ಸ್ ಅಸೆಂಬ್ಲಿ ಚುನಾವಣೆಯಲ್ಲಿ ವಿರೋಧ ಮತಗಳಿರುವುದನ್ನು ರಾಜ್ಯ ಮಾಧ್ಯಮವೇ ಒಪ್ಪಿಕೊಂಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಈ ಬಾರಿ ಆಯ್ಕೆಯಾದವರಲ್ಲಿ ಕಿಮ್ ಯೋ ಜೊಂಗ್ ಕೂಡ ಇದ್ದಾರೆ. ಅವರು ಕಿಮ್ ಜಾಂಗ್ ಉನ್ ಅವರ ಸಹೋದರಿ ಆಗಿದ್ದು, ಕಲ್ಲಿಮ್ಗಿಲ್ ಕ್ಷೇತ್ರ ಸಂಖ್ಯೆ 5ರಲ್ಲಿ ಜಯ ಸಾಧಿಸಿದ್ದಾರೆ. ಉತ್ತರ ಕೊರಿಯಾದಲ್ಲಿ ಇಂತಹ ಭಾರೀ ಬಹುಮತದ ಗೆಲುವುಗಳು ಸಾಮಾನ್ಯವಾದರೂ, ಈ ಬಾರಿ ಕಂಡುಬಂದ 0.07% ವಿರೋಧ ಮತಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಂಗ್ಯ ಮತ್ತು ಚರ್ಚೆಗೆ ಕಾರಣವಾಗಿವೆ. “ಆ 0.07% ಜನರಿಗೆ ಮೌನದ ಕ್ಷಣ” ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರೆ, “ಕಿಮ್ ಅವರ ಚಿತ್ರದ ಜೊತೆಗೆ ಆ ವಿರೋಧ ಮತದಾರರ ಫೋಟೋ ಕೂಡ ಹಾಕಿ” ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ.