ಕ್ಯಾಂಟರ್ಬರಿ, ಮಾ. 25 (DaijiworldNews/AA): ಸಾರಾ ಮುಲ್ಲಲ್ಲಿ ಅವರು ಕ್ಯಾಂಟರ್ಬರಿಯ 106ನೇ ಆರ್ಚ್ಬಿಷಪ್ ಆಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೂಲಕ 1,400 ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಈ ಅತ್ಯುನ್ನತ ಪದವಿಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಕ್ಯಾಂಟರ್ಬರಿ ಕ್ಯಾಥೆಡ್ರಲ್ನಲ್ಲಿ ನಡೆದ ಈ ವೈಭವದ ಸಮಾರಂಭದಲ್ಲಿ ಬ್ರಿಟನ್ನ ರಾಜಕುಮಾರ ವಿಲಿಯಂ, ವೇಲ್ಸ್ ರಾಜಕುಮಾರಿ ಕ್ಯಾಥರಿನ್ ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸೇರಿದಂತೆ 2,000ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು.
ಸರ್ರೆ ಮೂಲದ ಸಾರಾ ಮುಲ್ಲಲ್ಲಿ ಅವರು ವೃತ್ತಿಜೀವನ ಆರಂಭಿಸಿದ್ದು ನರ್ಸ್ ಆಗಿ. ಲಂಡನ್ನ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ನರ್ಸಿಂಗ್ನಲ್ಲಿ ಕ್ಲೀನಿಕಲ್ ತರಬೇತಿ ಪಡೆದ ಇವರು, 1999ರಲ್ಲಿ ತಮ್ಮ ಇಂಗ್ಲೆಂಡ್ನ ಅತಿ ಕಿರಿಯ 'ಚೀಫ್ ನರ್ಸಿಂಗ್ ಆಫೀಸರ್' ಆಗಿ ನೇಮಕಗೊಂಡಿದ್ದರು.
ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಲೇ ಇವರು 2001ರಲ್ಲಿ ಪಾದ್ರಿಯಾಗಿ ದೀಕ್ಷೆ ಪಡೆದರು. 2015ರಲ್ಲಿ ಬಿಷಪ್ ಆಗಿ ನೇಮಕಗೊಂಡ ಇವರು, 2018ರಲ್ಲಿ ಲಂಡನ್ನ ಬಿಷಪ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದರು.
ಸಮಾರಂಭದಲ್ಲಿ ತಮ್ಮ ನರ್ಸಿಂಗ್ ಸಮವಸ್ತ್ರದ ಬೆಲ್ಟ್ ಬಕಲ್ನಿಂದ ಮಾಡಿದ ಕ್ಲಾಸ್ಪ್ ಅನ್ನು ಧರಿಸಿದ್ದರು. ಲಂಡನ್ನಿಂದ ಕ್ಯಾಂಟರ್ಬರಿವರೆಗೆ 87 ಮೈಲುಗಳ ಪಾದಯಾತ್ರೆ ನಡೆಸುವ ಮೂಲಕ ಈ ಪದವಿ ಅಲಂಕರಿಸಿದ ಮೊದಲ ಆಧುನಿಕ ಆರ್ಚ್ಬಿಷಪ್ ಎನಿಸಿಕೊಂಡಿದ್ದಾರೆ.