ಟೆಹ್ರಾನ್, ಮಾ. 26 (DaijiworldNews/AA): ಭಾರತ, ಚೀನಾ, ರಷ್ಯಾ, ಇರಾಕ್ ಮತ್ತು ಪಾಕಿಸ್ತಾನ ಸೇರಿದಂತೆ ಮಿತ್ರ ರಾಷ್ಟ್ರಗಳ ಹಡುಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಾಗಲು ಇರಾನ್ ಅನುಮತಿ ನೀಡಿದೆ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮಾಹಿತಿ ನೀಡಿದ್ದಾರೆ.

ಇಸ್ರೇಲ್ ಮತ್ತು ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ತೈಲ ಸಾಗಾಟ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ ನಿರ್ಬಂಧಿಸಿತ್ತು. ಆದರೆ ಇತ್ತೀಚೆಗೆ ಅಮೆರಿಕ 1 ತಿಂಗಳ ಕದನ ವಿರಾಮ ಘೋಷಿಸಿದ ಕೆಲ ದಿನಗಳ ಬಳಿಕ ಇರಾನ್ ಮಿತ್ರರಾಷ್ಟ್ರಗಳ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯಲ್ಲಿ ಸಾಗಲು ಅನುಮತಿ ನೀಡಿದೆ.
ಮಿತ್ರರಾಷ್ಟ್ರಗಳಿಗೆ ಜಲಮಾರ್ಗವನ್ನ ಮುಕ್ತಗೊಳಿಸಲಾಗಿದ್ದು, ಶತ್ರು ರಾಷ್ಟ್ರಗಳಿಗೆ ಮಾತ್ರ ಹಾರ್ಮುಜ್ ಜಲಸಂಧಿಯನ್ನ ಮುಚ್ಚಲಾಗಿದೆ. ಶತ್ರು ರಾಷ್ಟ್ರದ ಹಡಗುಗಳು ಹಾದುಹೋಗಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಅರಘ್ಚಿ ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯಗಳು ಕಂಡುಬರುತ್ತಿದ್ದ ಹಿನ್ನೆಲೆ ಹಾರ್ಮುಜ್ ಜಲಸಂಧಿಯನ್ನ ತೆರೆಯುವಂತೆ ಇರಾನ್ಗೆ ವಿಶ್ವಸಂಸ್ಥೆ ಕರೆ ನೀಡಿತ್ತು. ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಈ ಬಗ್ಗೆ ಇರಾನ್ಗೆ ಹೇಳಿದ್ದರು. ಗುಟೆರೆಸ್ ಕರೆ ನೀಡಿದ ಬೆನ್ನಲ್ಲೇ ಇರಾನ್ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.