ವಾಷಿಂಗ್ಟನ್, ಮಾ. 27 (DaijiworldNews/TA) : ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆ ಹಾರ್ಮುಜ್ ಜಲಸಂಧಿ ತೆರೆಯುವ ವಿಚಾರವಾಗಿ ಅಮೆರಿಕ ಮತ್ತೊಮ್ಮೆ ಇರಾನ್ಗೆ ಗಡುವು ವಿಸ್ತರಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ನೀಡಿದ್ದ ಗಡುವನ್ನು ಏಪ್ರಿಲ್ 6ರವರೆಗೆ ವಿಸ್ತರಿಸಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಅವರು ಗುರುವಾರ ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲು ಏಪ್ರಿಲ್ 27ರವರೆಗೆ ಗಡುವು ನೀಡಲಾಗಿತ್ತು. ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಮೆರಿಕವು ಹೊಸ ದಿನಾಂಕ ನಿಗದಿಪಡಿಸಿತು. ಇದೀಗ ಮತ್ತೊಮ್ಮೆ ಗಡುವು ವಿಸ್ತರಿಸಿದ್ದು, ಮಾತುಕತೆಗಳಿಗೆ ಅವಕಾಶ ನೀಡಲಾಗಿದೆ.
ಟ್ರಂಪ್ ಹೇಳುವಂತೆ, ಏಪ್ರಿಲ್ 6ರವರೆಗೆ ಇರಾನ್ನ ಇಂಧನ ಮೂಲಸೌಕರ್ಯಗಳ ಮೇಲೆ ಯಾವುದೇ ಸೈನಿಕ ದಾಳಿ ನಡೆಸುವುದಿಲ್ಲ. ಎರಡೂ ದೇಶಗಳ ನಡುವಿನ ಮಾತುಕತೆಗಳು ಉತ್ತಮ ರೀತಿಯಲ್ಲಿ ಸಾಗುತ್ತಿವೆ ಎಂಬುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು, ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಮತ್ತು ಮಾತುಕತೆಗೆ ಬಾರದಿದ್ದರೆ “ಇದುವರೆಗಿನ ಅತಿದೊಡ್ಡ ದಾಳಿ” ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ಈಗಿನ ವಿಸ್ತರಣೆ ಮೂಲಕ ಇನ್ನೂ 10 ದಿನಗಳ ಕಾಲ ಸೈನಿಕ ಕ್ರಮವನ್ನು ಮುಂದೂಡಲಾಗಿದೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ ನಂತರ ಪರಿಸ್ಥಿತಿ ಗಂಭೀರಗೊಂಡಿದೆ. ಪ್ರತಿಯಾಗಿ ಇರಾನ್ ಗಲ್ಫ್ ಪ್ರದೇಶದಲ್ಲಿರುವ ಅಮೇರಿಕಾ ಮತ್ತು ಇಸ್ರೇಲ್ ನೆಲೆಗಳ ಮೇಲೆ ದಾಳಿ ನಡೆಸಿ, ಹಾರ್ಮುಜ್ ಜಲಸಂಧಿಯ ಮೂಲಕ ಇಂಧನ ರಫ್ತುಗಳನ್ನು ತಡೆಯುವ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.
ಈ ನಡುವೆ, ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಇರಾನ್ಗೆ 15 ಅಂಶಗಳ ಶಾಂತಿ ಕಾರ್ಯಸೂಚಿ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಆದರೆ, ಅದನ್ನು ಏಕಪಕ್ಷೀಯವೆಂದು ಇರಾನ್ ತಿರಸ್ಕರಿಸಿದೆ. ಎರಡೂ ದೇಶಗಳ ನಡುವೆ ಕದನ ವಿರಾಮ ಅಥವಾ ರಾಜಿ ಕುರಿತು ವದಂತಿಗಳು ಹರಿದಾಡುತ್ತಿದ್ದರೂ, ಇರಾನ್ ಯಾವುದೇ ಅಧಿಕೃತ ಮಾತುಕತೆಗಳು ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಎರಡೂ ಪಾಳಯಗಳು ತಮ್ಮ ತಮ್ಮ ಕಟ್ಟುನಿಟ್ಟಿನ ನಿಲುವುಗಳನ್ನು ಮುಂದುವರಿಸುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.