ಇಸ್ಲಾಮಾಬಾದ್, ಆ.06(Daijiworld News/SS): ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಕೈಗೊಂಡ ಅಸಂವಿಧಾನಿಕ ಕ್ರಮದಿಂದ ನಿಜ ಬಣ್ಣಬಯಲಾಗಿದೆ ಎಂದು ಪಾಕ್ ಪ್ರತಿಕ್ರಿಯಿಸಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಾಶ್ಮೀರದ ಜನರ ವಿಶೇಷ ಹಕ್ಕುಗಳನ್ನು ದುರ್ಬಲಗೊಳಿಸಿ, ಅದನ್ನು ಕಸಿಯಲು ಹೊರಟು ಕಣಿವೆಯಲ್ಲಿ ಭಾರಿ ಭದ್ರತಾ ಪಡೆ ನಿಯೋಜನೆ ಮಾಡಿದೆ. ಇದನ್ನು ಎದುರಿಸಲು ಸಾಧ್ಯವಿರುವ ಎಲ್ಲ ಆಯ್ಕೆ, ಅವಕಾಶ ಬಳಸಿಕೊಳ್ಳುವುದಾಗಿ ಪಾಕಿಸ್ತಾನ ಹೇಳಿದೆ.
ಈಗಾಗಲೇ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಪಾಕ್ ವಿದೇಶಾಂಗ ಸಚಿವಾಲಯ ಭಾರತ ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿ ಪ್ರಸ್ತಾವವನ್ನು ತಿರಸ್ಕರಿಸಿದೆ. ಕಾಶ್ಮೀರ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದಿತ ಪ್ರದೇಶವೆಂದು ಗುರುತಿಸಲ್ಪಟ್ಟಿದೆ ಎಂದು ಒತ್ತಿ ಹೇಳಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯಗಳಲ್ಲಿ ಪ್ರತಿಪಾದಿಸಿರುವಂತೆ ಭಾರತದ ಯಾವುದೇ ಏಕಪಕ್ಷೀಯ ತೀರ್ಮಾನ ವಿವಾದಿತ ಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ ಮೇಲಾಗಿ ಈ ನಿರ್ಧಾರವು ಕಾಶ್ಮೀರ ಮತ್ತು ಪಾಕಿಸ್ತಾನದ ಜನರ ಪರವಾಗಿಲ್ಲ ಎಂದು ಹೇಳಿದೆ.
ಈ ನಿಟ್ಟಿನಲ್ಲಿ ಭಾರತ ಕೈಗೊಂಡ ಅಕ್ರಮ ತೀರ್ಮಾನವನ್ನು ಎದುರಿಸಲು ಪಾಕ್ ಸಾಧ್ಯವಿರುವ ಎಲ್ಲ ಆಯ್ಕೆಗಳನ್ನು ಅವಕಾಶ ಬಳಕೆ ಮಾಡಿಕೊಳ್ಳಲಿದೆ ಎಂದು ಪಾಕ್ ಪತ್ರಿಕೆ ವರದಿ ಮಾಡಿದೆ.