ಇಸ್ಲಾಮಾಬಾದ್, ಆ.07(Daijiworld News/SS): ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳತ್ತ ಅಂತರರಾಷ್ಟ್ರೀಯ ಸಮುದಾಯ ಗಮನಹರಿಸಬೇಕು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಜಮ್ಮು ಕಾಶ್ಮೀರ ವಿಚಾರವಾಗಿ ಚರ್ಚಿಸಲು ಕರೆದಿದ್ದ ವಿಶೇಷ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಅವರು, ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದರಿಂದ ಪುಲ್ವಾಮಾ ಮಾದರಿಯ ದಾಳಿ ನಡೆದು, ಭಾರತ– ಪಾಕಿಸ್ತಾನದ ಮಧ್ಯೆ ಪೂರ್ಣಪ್ರಮಾಣದ ಯುದ್ಧ ನಡೆಯುವ ಸಂಭವ ಇದೆ. ಈ ಯುದ್ಧದಲ್ಲಿ ಯಾರೂ ಗೆಲ್ಲಲಾರರು ಆದರೆ ಅದರ ಪರಿಣಾಮ ಜಾಗತಿಕ ಮಟ್ಟದಲ್ಲಿ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಶ್ಮೀರದಲ್ಲಿ ಭಾರತದ ಕ್ರಮವನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯಲಿವೆ. ಪ್ರತಿಭಟನೆ ನಡೆಸುವವರ ಮೇಲೆ ಭಾರತವು ದಾಳಿ ನಡೆಸಬಹುದು. ಇದು ಭಾರತ– ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗಬಹುದು. ಹೀಗಾದಾಗ ಪುಲ್ವಾಮಾ ಮಾದರಿಯ ಘಟನೆಗಳು ನಡೆದೇ ನಡೆಯುತ್ತವೆ. ಭಾರತವು ಅದರ ಆರೋಪವನ್ನು ನಮ್ಮ ಮೇಲೆ ಹೊರಿಸಿ ನಮ್ಮ ಮೇಲೆ ದಾಳಿ ನಡೆಸಬಹುದು. ಪ್ರತ್ಯುತ್ತರವಾಗಿ ನಾವೂ ದಾಳಿ ನಡೆಸಬೇಕಾಗುತ್ತದೆ ಎಂದು ಹೇಳಿದರು.
ಮೋದಿ ಅವರು ಮುಸ್ಲಿಂ ವಿರೋಧಿ ಕಾರ್ಯಸೂಚಿ ಜಾರಿ ಮಾಡುವ ಮೂಲಕ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದ್ದಾರೆ. ಜಗತ್ತು ಈ ಕೂಡಲೇ ಭಾರತದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಾವೇ ರಚಿಸಿದ ಕಾನೂನಿಗೆ ಗೌರವ ಕೊಡದೆ ಸುಮ್ಮನೆ ಕುಳಿತರೆ ಮುಂದೆ ಸಂಭವಿಸುವ ಬೆಳವಣಿಗೆಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ. ಎರಡು ಅಣ್ವಸ್ತ್ರ ರಾಷ್ಟ್ರಗಳ ಮಧ್ಯೆ ನಡೆಯುವ ಯುದ್ಧದಲ್ಲಿ ಯಾರೂ ಗೆಲ್ಲಲಾರರು. ಆದರೆ ಪರಿಣಾಮ ಮಾತ್ರ ಜಾಗತಿಕ ಮಟ್ಟದಲ್ಲಾಗುವುದು. ನನ್ನ ಮಾತುಗಳನ್ನು ಅಣ್ವಸ್ತ್ರ ಬ್ಲ್ಯಾಕ್ಮೇಲ್ ಅಂತಾ ತಿಳಿಯಬಾರದು ಎಂದು ಹೇಳಿದರು.
ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳತ್ತ ಅಂತರರಾಷ್ಟ್ರೀಯ ಸಮುದಾಯ ಗಮನಹರಿಸಬೇಕು. ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಭಾರತದ ಕ್ರಮವನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಶ್ನಿಸಲಾಗುವುದು. ಅಂತರರಾಷ್ಟ್ರೀಯ ವೇದಿಕೆ ಮತ್ತು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲೂ ಪ್ರಶ್ನಿಸಲಾಗುವುದು ಎಂದು ಹೇಳಿದ್ದಾರೆ.