ವಾಷಿಂಗ್ಟನ್, ಮೇ. 01(DaijiworldNews/AK):ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಸಂಘರ್ಷದ ಕುರಿತು ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇಸ್ಲಾಮಿಕ್ ಗಣರಾಜ್ಯವು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ ಎಂದು ಪ್ರತಿಪಾದಿಸಿದ್ದಾರೆ.

ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್ನ ಆರ್ಥಿಕತೆ ಮತ್ತು ಮಿಲಿಟರಿ ಸಾಮರ್ಥ್ಯದ ಕುರಿತು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಅಮೆರಿಕ ಹೇರಿರುವ ಆರ್ಥಿಕ ದಿಗ್ಬಂಧನಗಳು ಇರಾನ್ ಮೇಲೆ ಭಾರಿ ಪರಿಣಾಮ ಬೀರಿದ್ದು, ಆ ದೇಶದ ಆರ್ಥಿಕತೆ ಕುಸಿಯುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ದಿಗ್ಬಂಧನದಿಂದಾಗಿ ಇರಾನ್ಗೆ ತೈಲ ಮಾರಾಟದಿಂದ ಯಾವುದೇ ಹಣ ಸಿಗುತ್ತಿಲ್ಲ. ಈ ಒತ್ತಡದಿಂದಾಗಿ ಇರಾನ್ ಈಗ ಒಪ್ಪಂದ ಮಾಡಿಕೊಳ್ಳಲು ಕಾತರವಾಗಿದೆ, ಆದರೆ ಪ್ರಸ್ತುತ ನಡೆಯುತ್ತಿರುವ ಮಾತುಕತೆಗಳ ನೈಜ ಸ್ಥಿತಿಯ ಬಗ್ಗೆ ಜಗತ್ತಿನ ಕೆಲವೇ ಜನರಿಗೆ ಮಾತ್ರ ತಿಳಿದಿದೆ ಎಂದು ಅವರು ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ಇರಾನ್ ಸುಮಾರು 42,000 ಮುಗ್ಧ ಜನರನ್ನು ಕೊಂದಿದೆ ಎಂದು ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ. ಪ್ರತಿಭಟನೆ ನಡೆಸಿದವರನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಗುತ್ತಿದೆ ಮತ್ತು ಅವರು ಹೇಳುವ ಸಂಖ್ಯೆಗಿಂತ ಇದು ಇನ್ನೂ ಹೆಚ್ಚಿರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.