ವಾಷಿಂಗ್ಟನ್, ಮೇ. 03 (DaijiworldNews/AA): ಬೆಂಗಳೂರು ಮೂಲದ ಸ್ಪೇಸ್ಟೆಕ್ ಸ್ಟಾರ್ಟ್ಅಪ್ ಗ್ಯಾಲಕ್ಸ್ ಐ ಅಭಿವೃದ್ಧಿ ಪಡಿಸಿದ ಮಿಷನ್ ದೃಷ್ಟಿ ಉಪಗ್ರಹವನ್ನು ಭಾನುವಾರ ಯಶಸ್ವಿಯಾಗಿ ಉಡ್ಡಯನ ಮಾಡಲಾಯಿತು.

ಈ ಉಪಗ್ರಹವನ್ನು ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಸ್ಪೇಸ್ಎಕ್ಸ್ ನ ಫಾಲ್ಕನ್ 9 ರಾಕೆಟ್ ಮೂಲಕ ಭಾರತೀಯ ಕಾಲಮಾನ ಮಧ್ಯಾಹ್ನ 12:29ಕ್ಕೆ ಉಡಾವಣೆ ಮಾಡಲಾಯಿತು. ವಿಶ್ವದ ಮೊದಲ ಆಪ್ಟೋಸಾರ್ ಉಪಗ್ರಹ ಈಗ ಬಾಹ್ಯಾಕಾಶವನ್ನು ಯಶಸ್ವಿಯಾಗಿ ತಲುಪಿದೆ. ವಿಶ್ವಕ್ಕಾಗಿ ಭಾರತದಲ್ಲಿ ತಯಾರಿಸಲ್ಪಟ್ಟಿದೆ ಎಂದು ಗ್ಯಾಲಕ್ಸ್ ಐ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಗ್ಯಾಲಕ್ಸ್ ಐ ಕಂಪನಿಯನ್ನು ಐಐಟಿ ಮದ್ರಾಸ್ನ ಹಳೆಯ ವಿದ್ಯಾರ್ಥಿಗಳು ಸ್ಥಾಪಿಸಿದೆ. ಇನ್ನು ಕಂಪನಿಯು ಈ ಉಪಗ್ರಹವನ್ನು ಸಂಪೂರ್ಣವಾಗಿ ದೇಶಿಯವಾಗಿ ಅಭಿವೃದ್ಧಿಪಡಿಸಿದೆ. ಸುಮಾರು 190 ಕೆಜಿ ತೂಕವಿರುವ ಉಪಗ್ರಹ ಭಾರತದ ಖಾಸಗಿ ವಲಯದಲ್ಲಿ ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದು ಸಿಂಥೆಟಿಕ್ ಅಪರ್ಚರ್ ರಾಡಾರ್ ಮತ್ತು ಮಲ್ಟಿಸ್ಪೆಕ್ಟ್ರಲ್ ಇಮೇಜಿಂಗ್ ಎರಡನ್ನೂ ಏಕಕಾಲದಲ್ಲಿ ಹೊಂದಿರುವ ವಿಶ್ವದ ಮೊದಲ ಉಪಗ್ರಹವಾಗಿದೆ. ಭೂಮಿಯಿಂದ 500 ಕಿ.ಮೀ ಎತ್ತರದ ಕಕ್ಷೆಯಲ್ಲಿ ಸುತ್ತುವ ಈ ಉಪಗ್ರಹ ಸುಮಾರು 1.2 ರಿಂದ 1.8 ಮೀಟರ್ವರೆಗಿನ ಸ್ಪಷ್ಟ ಚಿತ್ರಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.