ವಾಷಿಂಗ್ಟನ್, ಮೇ. 23 (DaijiworldNews/TA): ಅಮೇರಿಕಾದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿಯಾಗಿದ್ದ ತುಳಸಿ ಗಬ್ಬಾರ್ಡ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ. 45 ವರ್ಷದ ಗಬ್ಬಾರ್ಡ್ ಅವರು ಶುಕ್ರವಾರ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತಮ್ಮ ರಾಜೀನಾಮೆ ಪತ್ರವನ್ನು ಹಂಚಿಕೊಂಡಿದ್ದಾರೆ.

ತಮ್ಮ ರಾಜೀನಾಮೆಯ ಹಿಂದೆ ಕುಟುಂಬದ ಗಂಭೀರ ಆರೋಗ್ಯ ಸಮಸ್ಯೆಯೇ ಪ್ರಮುಖ ಕಾರಣ ಎಂದು ಅವರು ತಿಳಿಸಿದ್ದಾರೆ. ಗಬ್ಬಾರ್ಡ್ ಅವರ ಪತಿ ಅಬ್ರಹಾಂ ಅವರಿಗೆ ಅಪರೂಪದ ಮೂಳೆ ಕ್ಯಾನ್ಸರ್ ಇರುವುದು ಇತ್ತೀಚೆಗೆ ಪತ್ತೆಯಾಗಿದೆ. ಕಳೆದ 11 ವರ್ಷಗಳ ದಾಂಪತ್ಯ ಜೀವನದಲ್ಲಿ ಎಲ್ಲ ಕಷ್ಟಸಮಯಗಳಲ್ಲೂ ಬೆಂಬಲವಾಗಿ ನಿಂತ ಪತಿಯನ್ನು ಈ ಸಂಕಷ್ಟದ ಸಮಯದಲ್ಲಿ ಒಂಟಿಯಾಗಿಡಲು ಸಾಧ್ಯವಿಲ್ಲ ಎಂದು ಅವರು ಭಾವುಕರಾಗಿ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಪತಿಯ ಚಿಕಿತ್ಸೆಗೆ ಮತ್ತು ಅವರ ಆರೋಗ್ಯ ಹೋರಾಟಕ್ಕೆ ಸಂಪೂರ್ಣ ಸಮಯ ನೀಡಲು ಸಾರ್ವಜನಿಕ ಸೇವೆಯಿಂದ ಹಿಂದೆ ಸರಿಯುತ್ತಿರುವುದಾಗಿ ಗಬ್ಬಾರ್ಡ್ ಸ್ಪಷ್ಟಪಡಿಸಿದ್ದಾರೆ. ಜೂನ್ 30ರಂದು ಅವರು ಅಧಿಕೃತವಾಗಿ ತಮ್ಮ ಹುದ್ದೆಯಿಂದ ನಿರ್ಗಮಿಸಲಿದ್ದಾರೆ.
ಈ ವೇಳೆ ತಮ್ಮ ಮೇಲೆ ವಿಶ್ವಾಸವಿಟ್ಟು ಮಹತ್ವದ ಜವಾಬ್ದಾರಿ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಗಬ್ಬಾರ್ಡ್ ಧನ್ಯವಾದ ತಿಳಿಸಿದ್ದಾರೆ. ಆಡಳಿತದ ಕಾರ್ಯಭಾರವನ್ನು ಸುಗಮವಾಗಿ ಹಸ್ತಾಂತರಿಸಲು ಸಹಕರಿಸುವುದಾಗಿ ಅವರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಗಬ್ಬಾರ್ಡ್ ಅವರ ರಾಜೀನಾಮೆಯನ್ನು “ದುರದೃಷ್ಟಕರ” ಎಂದು ವರ್ಣಿಸಿದ್ದು, ತಮ್ಮ ಅವಧಿಯಲ್ಲಿ ಅವರು ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಶಂಸಿಸಿದ್ದಾರೆ. ಟ್ರುತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಗಬ್ಬಾರ್ಡ್ ಅವರ ಪತಿಯ ಆರೋಗ್ಯ ಶೀಘ್ರ ಸುಧಾರಿಸಲಿ ಎಂದು ಪ್ರಾರ್ಥಿಸಿದ್ದಾರೆ. ಜೊತೆಗೆ, ಪ್ರಸ್ತುತ ರಾಷ್ಟ್ರೀಯ ಗುಪ್ತಚರ ವಿಭಾಗದ ಪ್ರಧಾನ ಉಪ ನಿರ್ದೇಶಕರಾಗಿರುವ ಆರನ್ ಲುಕಾಸ್ ಅವರನ್ನು ಹಂಗಾಮಿ ನಿರ್ದೇಶಕರಾಗಿ ನೇಮಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಹವಾಯಿಯ ಮಾಜಿ ಡೆಮಾಕ್ರಟಿಕ್ ಕಾಂಗ್ರೆಸ್ ಸದಸ್ಯೆಯಾಗಿದ್ದ ತುಳಸಿ ಗಬ್ಬಾರ್ಡ್ ಅವರನ್ನು ಕಳೆದ ವರ್ಷ ಟ್ರಂಪ್ ಆಡಳಿತ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆಯಾಗಿ ನೇಮಿಸಿತ್ತು.
ಗಬ್ಬಾರ್ಡ್ ಅವರು ಪತಿಯ ಅನಾರೋಗ್ಯವನ್ನು ರಾಜೀನಾಮೆಗೆ ಮುಖ್ಯ ಕಾರಣವೆಂದು ಹೇಳಿದ್ದರೂ, ರಾಜಕೀಯ ವಲಯದಲ್ಲಿ ಬೇರೆ ಚರ್ಚೆಗಳೂ ಕೇಳಿಬರುತ್ತಿವೆ. ವಿಶೇಷವಾಗಿ ಇರಾನ್ ಪರಮಾಣು ಕಾರ್ಯಕ್ರಮದ ವಿಚಾರದಲ್ಲಿ ಟ್ರಂಪ್ ಮತ್ತು ಗಬ್ಬಾರ್ಡ್ ನಡುವಿನ ಭಿನ್ನಾಭಿಪ್ರಾಯಗಳು ಗಮನ ಸೆಳೆದಿದ್ದವು.
ಇರಾನ್ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಗೆ ಮುಂದಾಗಿದೆ ಎಂದು ಟ್ರಂಪ್ ಹಲವು ಬಾರಿ ಹೇಳಿಕೆ ನೀಡಿದ್ದರೆ, ಗಬ್ಬಾರ್ಡ್ ಮಾತ್ರ ಸೆನೆಟ್ ಸಮಿತಿಗೆ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ ಇರಾನ್ ತನ್ನ ಪರಮಾಣು ಸಾಮರ್ಥ್ಯವನ್ನು ಪುನರ್ನಿರ್ಮಿಸಲು ಹೊಸ ಪ್ರಯತ್ನ ನಡೆಸುತ್ತಿರುವುದಕ್ಕೆ ಸ್ಪಷ್ಟ ಸಾಕ್ಷ್ಯಗಳಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು.
ಇತ್ತೀಚೆಗೆ ವಲಸೆ ಹಾಗೂ ವಿಪತ್ತು ನಿರ್ವಹಣೆಯ ಟೀಕೆಗಳ ಹಿನ್ನೆಲೆ ಕ್ರಿಸ್ಟಿ ನೋಮ್ ಮತ್ತು ಪಾಮ್ ಬೋಂಡಿ ಅವರನ್ನು ಟ್ರಂಪ್ ಆಡಳಿತದಿಂದ ವಜಾಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ತುಳಸಿ ಗಬ್ಬಾರ್ಡ್ ಅವರ ರಾಜೀನಾಮೆ ಪ್ರಕಟವಾಗಿರುವುದು ಅಮೆರಿಕ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.