ವಾಷಿಂಗ್ಟನ್, ಮೇ. 24 (DaijiworldNews/AA): ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಗೆ ಪ್ರತಿಯಾಗಿ ಅಧಿಕಾರಿಗಳು ಗುಂಡು ಹಾರಿಸಿದ್ದು, ಶಂಕಿತ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಪೆನ್ಸಿಲ್ವೇನಿಯಾ ಅವೆನ್ಯೂ NW ಬಳಿ ಶಂಕಿತ 20 ಸುತ್ತು ಗುಂಡು ಹಾರಿಸಿದ್ದಾನೆ. ಅಮೆರಿಕದ ಭದ್ರತಾ ಪಡೆ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ. ಗುಂಡಿನ ನಡೆದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದರು ಎನ್ನಲಾಗಿದೆ.
ಮೇ 23ರ ಸಂಜೆ ಸುಮಾರು 6 ಗಂಟೆಯ ನಂತರ ವ್ಯಕ್ತಿಯೋರ್ವ ಭದ್ರತಾ ತಪಾಸಣಾ ಕೇಂದ್ರದತ್ತ ಬಂದು ತನ್ನ ಬ್ಯಾಗಿನಿಂದ ಗನ್ ತೆಗೆದು ಕರ್ತವ್ಯದಲ್ಲಿದ್ದ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ಆರಂಭಿಸಿದ್ದ. ದಾಳಿಯ ವೇಳೆ ಅದಕ್ಕೆ ಪ್ರತಿಯಾಗಿ ಅಧಿಕಾರಿಗಳು ಗುಂಡು ಹಾರಿಸಿದ್ದು, ಶಂಕಿತನಿಗೆ ಗುಂಡು ತಗುಲಿತ್ತು. ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಅಮೆರಿಕದ ಸೀಕ್ರೆಟ್ ಸರ್ವಿಸ್ ಶನಿವಾರ ತಡರಾತ್ರಿ ಪ್ರಕಟಣೆ ಹೊರಡಿಸಿದೆ.
ಘಟನೆಯಲ್ಲಿ ಓರ್ವ ಪಾದಚಾರಿಗೂ ಗಾಯಗಳಾಗಿವೆ. ಆದರೆ ಆ ವ್ಯಕ್ತಿಗೆ ಶಂಕಿತನ ಗುಂಡಿನಿಂದ ಗಾಯವಾಗಿದೆಯೋ ಅಥವಾ ಅಧಿಕಾರಿಗಳ ಪ್ರತಿದಾಳಿಯ ವೇಳೆ ಗಾಯವಾಗಿದೆಯೋ ಎಂಬುದು ತಿಳಿದುಬಂದಿಲ್ಲ. ಸೀಕ್ರೆಟ್ ಸರ್ವಿಸ್ ಅಧಿಕಾರಿಗಳಲ್ಲಿ ಯಾರಿಗೂ ಗಾಯಗಳಾಗಿಲ್ಲ. ಘಟನೆ ನಡೆಯುವ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ಒಳಗೇ ಇದ್ದರು. ಆದರೆ ಅವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.