ಇಸ್ಲಾಮಾಬಾದ್, ಮೇ. 24 (DaijiworldNews/AA): ಚಲಿಸುತ್ತಿದ್ದ ರೈಲಿನಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಗೊಂಡ ಪರಿಣಾಮ 24 ಮಂದಿ ಸಾವನ್ನಪ್ಪಿ, 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಕ್ವೆಟ್ಟಾ ಪ್ರಾಂತ್ಯದಲ್ಲಿ ಸಂಭವಿಸಿದೆ.

ಸ್ಫೋಟದ ಬಳಿಕ ಕೃತ್ಯದ ಹೊಣೆಯನ್ನು ನಿಷೇಧಿತ ಬಲೂಚ್ ಲಿಬರೇಶನ್ ಆರ್ಮಿ ಹೊತ್ತುಕೊಂಡಿದೆ. ಪಾಕಿಸ್ತಾನ ಮಿಲಿಟರಿ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿ ಇದಾಗಿದೆ ಎಂದು ಬಲೂಚ್ ಲಿಬರೇಶನ್ ಆರ್ಮಿ ತಿಳಿಸಿದೆ.
ಸ್ಫೋಟದ ಬಳಿಕ ಸ್ಥಳದಲ್ಲಿ ಭಾರೀ ಗುಂಡಿನ ಸದ್ದು ಕೇಳಿಬಂದಿದೆ. ಬಾಂಬ್ ಸ್ಫೋಟದ ಪರಿಣಾಮ ರೈಲ್ವೆ ಟ್ರ್ಯಾಕ್ ಬಳಿಯ ಮನೆಗಳಲ್ಲಿ ಪಾರ್ಕ್ ಮಾಡಿದ್ದ ಹತ್ತಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಅಲ್ಲದೇ ಮನೆಗಳ ಕಿಟಕಿಗಳು ಪುಡಿಯಾಗಿದೆ ಎಂದು ಹೇಳಲಾಗಿದೆ.
ರೈಲು ಕಂಟೋನ್ಮೆಂಟ್ನಿಂದ ತೆರಳುತ್ತಿದ್ದ ವೇಳೆ ಬಲೂಚಿಸ್ತಾನ ಪ್ರದೇಶದ ಕ್ವೆಟ್ಟಾದ ಚೆಮನ್ ಫಾಟಕ್ ಬಳಿ ಆತ್ಮಾಹುತಿ ಬಾಂಬ್ ಸ್ಫೋಟಗೊಂಡಿದೆ. ಬಾಂಬ್ ಸ್ಫೋಟದ ಪರಿಣಾಮ ರೈಲಿನ ಹಲವು ಬೋಗಿಗಳು ಹಳಿತಪ್ಪಿದ್ದು, ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ್ದು ರೈಲ್ವೆ, ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಡೆಸಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.