ವಾಷಿಂಗ್ಟನ್, ಜೂ. 02 (DaijiworldNews/AA): ನಾನಿಲ್ಲದಿದ್ದರೆ ನೀನು ಈ ಹೊತ್ತಿಗೆ ಜೈಲಿನಲ್ಲಿರುತ್ತಿದ್ದೆ, ನಾನು ನಿನ್ನನ್ನು ಉಳಿಸುತ್ತಿದ್ದೇನೆ. ಆದರೆ ಇಸ್ರೇಲ್ನ ಈ ಕ್ರಮಗಳಿಂದಾಗಿ ಇಡೀ ಜಗತ್ತು ಈಗ ನಿಮ್ಮನ್ನು ಮತ್ತು ಇಸ್ರೇಲ್ ಅನ್ನು ದ್ವೇಷಿಸುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.

ಲೆಬನಾನ್ನಲ್ಲಿ ಇಸ್ರೇಲ್ ಸೇನಾ ಕಾರ್ಯಾಚರಣೆ ತೀವ್ರಗೊಳ್ಳುತ್ತಿರುವ ನಡುವಲ್ಲೇ ನೆತನ್ಯಾಹು ಜೊತೆಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿರುವ ಟ್ರಂಪ್, "ನೀನು ಸಂಪೂರ್ಣ ಹುಚ್ಚನಂತೆ ವರ್ತಿಸುತ್ತಿದ್ದೀಯ. ನಾನು ಇರದೇ ಇದ್ದರೆ ಈಗಾಗಲೇ ಜೈಲಿನಲ್ಲಿರುತ್ತಿದ್ದೆ. ನಿನ್ನನ್ನು ನಾನು ಉಳಿಸುತ್ತಿದ್ದೇನೆ. ಈಗ ಎಲ್ಲರೂ ನಿನ್ನನ್ನು ದ್ವೇಷಿಸುತ್ತಿದ್ದಾರೆ. ನಿನ್ನ ಕ್ರಮಗಳಿಂದ ಇಸ್ರೇಲ್ ಮೇಲಿನ ಜಾಗತಿಕ ಬೆಂಬಲವೂ ಕುಸಿಯುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇರಾನ್ನೊಂದಿಗೆ ಹೊಸ ಶಾಂತಿ ಒಪ್ಪಂದ ಮಾಡಿಕೊಳ್ಳಲು ನಾವು ಕತಾರ್ ಮತ್ತು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸುವ ಪ್ರಯತ್ನ ನಡೆಸುತ್ತಿದ್ದೇವೆ. ಇಸ್ರೇಲ್ ಮಾಡುತ್ತಿರುವ ದಾಳಿಗಳು ಈ ಮಾತುಕತೆಯನ್ನು ಸಂಪೂರ್ಣವಾಗಿ ಹಳಿತಪ್ಪಿಸುತ್ತಿವೆ ಮತ್ತು ಇರಾನ್ ಮಾತುಕತೆಯಿಂದ ಹಿಂದೆ ಸರಿಯುವಂತೆ ಮಾಡುತ್ತಿದೆ. ಬೈರೂತ್ ಮೇಲೆ ನಡೆಸಲು ಯೋಜಿಸಿರುವ ಮುಂದಿನ ಮಿಲಿಟರಿ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಇರಾನ್ ಮೇಲಿನ ದಾಳಿಯ ಆಲೋಚನೆಯನ್ನು ಸದ್ಯಕ್ಕೆ ಬದಿಗಿಡಬೇಕು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ದೂರವಾಣಿ ಸಂಭಾಷಣೆಯ ವೇಳೆ ಟ್ರಂಪ್ ಅತ್ಯಂತ ಕೋಪಗೊಂಡಿದ್ದರು. ಇಸ್ರೇಲ್ನ ಕ್ರಮಗಳು ಜಾಗತಿಕ ಮಟ್ಟದಲ್ಲಿ ದೇಶವನ್ನು ಪ್ರತ್ಯೇಕಗೊಳಿಸುತ್ತಿವೆ ಮತ್ತು ಅಮೆರಿಕದ ಹಿತಾಸಕ್ತಿಗಳಿಗೂ ಹಾನಿ ಉಂಟುಮಾಡುತ್ತಿವೆ ಎಂದು ನೆತನ್ಯಾಹುಗೆ ಖಡಕ್ ಎಚ್ಚರಿಕೆ ನೀಡಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.