ಕುವೈತ್, ಜೂ. 03 (DaijiworldNews/AA): ಕೆಶ್ಮ್ ದ್ವೀಪದ ಮೇಲಿನ ದಾಳಿಗೆ ಪ್ರತೀಕಾರವಾಗಿ ಇರಾನ್ ಕುವೈತ್ ಹಾಗೂ ಬಹ್ರೇನ್ನಲ್ಲಿರುವ ಅಮೆರಿಕ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಬುಧವಾರ ಮುಂಜಾನೆ ಇರಾನ್ನ ಕೆಶ್ಮ್ ದ್ವೀಪದ ಘಟನೆಗೆ ಪ್ರತೀಕಾರವಾಗಿ ಕುವೈತ್ ಮತ್ತು ಬಹ್ರೇನ್ನಲ್ಲಿರುವ ಅಮೆರಿಕದ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ನ ಸಶಸ್ತ್ರ ಪಡೆಗಳು ತಿಳಿಸಿವೆ. ಇರಾನ್ನ ಈ ಹೇಳಿಕೆ ಬೆನ್ನಲ್ಲೇ ಅಮೆರಿಕ ಸೇನೆಯು ಈ ಎಲ್ಲ ವರದಿಗಳನ್ನು ತಳ್ಳಿ ಹಾಕಿದೆ.
ಅಮೆರಿಕವು ವಾರಾಂತ್ಯದಲ್ಲಿ ಇರಾನ್ನ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಿದ್ದು, ಅದಕ್ಕೆ ಪ್ರತಿಯಾಗಿ ಅಮೆರಿಕದ ನೆಲೆಯೊಂದನ್ನು ಗುರಿಯಾಗಿಸಿಕೊಂಡಿರುವುದಾಗಿ ತೆಹ್ರಾನ್ ಹೇಳಿದೆ. ಅಮೆರಿಕದ ಕೇಂದ್ರ ಕಮಾಂಡ್, ಅಂತಾರಾಷ್ಟ್ರೀಯ ಜಲಪ್ರದೇಶದ ಮೇಲೆ ಅಮೆರಿಕದ ಡ್ರೋನ್ ಅನ್ನು ಹೊಡೆದುರುಳಿಸುವುದನ್ನು ಒಳಗೊಂಡ ಇರಾನ್ನ ಕ್ರಮಗಳ ನಂತರ ಸ್ವಯಂರಕ್ಷಣಾತ್ಮಕ ದಾಳಿಗಳನ್ನು ನಡೆಸಿರುವುದಾಗಿ ಹೇಳಿದೆ.
ಬುಧವಾರ ಮುಂಜಾನೆ ಕುವೈತ್ನಾದ್ಯಂತ ಜೋರಾದ ಸ್ಫೋಟದ ಶಬ್ದಗಳು ಕೇಳಿಬಂದಾಗ ಕುವೈತ್ ಸೇನೆಯು ತಕ್ಷಣವೇ ಕಾರ್ಯಪ್ರವೃತ್ತವಾಯಿತು. 'ದೇಶದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳು ಅತ್ಯಂತ ಯಶಸ್ವಿಯಾಗಿ ವಾಯುಗಡಿಗೆ ನುಗ್ಗಿದ ಪ್ರತಿಕೂಲ ಕ್ಷಿಪಣಿ ಮತ್ತು ಡ್ರೋನ್ಗಳನ್ನು ತಡೆದು ಹೊಡೆದುರುಳಿಸಿವೆ' ಎಂದು ಕುವೈತ್ ಸೇನೆಯ ಜನರಲ್ ಸ್ಟಾಫ್ ಮಾಹಿತಿ ನೀಡಿದ್ದಾರೆ.