ಇಸ್ಲಾಮಾಬಾದ್, ಆ.29(Daijiworld News/SS): ಭಾರತಕ್ಕೆ ವಾಯುಮಾರ್ಗವನ್ನು ಮುಚ್ಚಲಾಗಿದೆ ಎಂಬ ವರದಿಗಳನ್ನು ಪಾಕಿಸ್ತಾನ ವಿದೇಶಾಂಗ ಮಂತ್ರಿ ಶಾ ಮೆಹಮ್ಮೂದ್ ಖುರೇಷಿ ತಳ್ಳಿ ಹಾಕಿದ್ದಾರೆ.
ಭಾರತಕ್ಕೆ ವಾಯುಮಾರ್ಗವನ್ನು ಸಂಪೂರ್ಣವಾಗಿ ಮುಚ್ಚುವ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಒಂದುವೇಳೆ ಈ ಬಗ್ಗೆ ಕ್ರಮ ಕೈಗೊಳ್ಳುವುದಿದ್ದರೆ ಪ್ರತಿಯೊಂದು ಅಂಶವನ್ನು ಗಮನಿಸಿದ ನಂತರ ಸಮಾಲೋಚನೆ ನಡೆಸಿ ಮುಂದಿನ ಹೆಜ್ಜೆಯಿಡಲಾಗುವುದು ಎಂದು ಶಾ ಮೆಹಮ್ಮೂದ್ ಖುರೇಷಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ಫೆಡರಲ್ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿತ್ತು. ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ಪ್ರಧಾನಿ ಇಮ್ರಾನ್ ಖಾನ್ ಅವರೇ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಹಲವು ಆಯಾಮಗಳನ್ನು ಗಮನಿಸಿ ಪರಿಶೀಲಿಸಿ ಸಲಹೆ ಪಡೆದು ಮುಂದುವರಿಯಲಾಗುವುದು ಎಂದು ತಿಳಿಸಿದರು.
ದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಫವದ್ ಚೌಧರಿ, ಭಾರತ-ಆಫ್ಘನ್ ನಡುವೆ ವ್ಯಾಪಾರ ಉದ್ಯಮಕ್ಕೆ ಬಳಸುತ್ತಿರುವ ಪಾಕಿಸ್ತಾನ ಭೂ ಮಾರ್ಗ ಸಂಚಾರಕ್ಕೂ ನಿಷೇಧ ಹೇರಲು ಚಿಂತನೆ ನಡೆಸುತ್ತಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಸಚಿವರುಗಳಿಂದ ಸಹ ಅಭಿಪ್ರಾಯಗಳು ಬಂದಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಇರುವ ಕಾನೂನು ವಿಚಾರಗಳನ್ನು ಪರಿಗಣಿಸಲಾಗುತ್ತಿದೆ. ಭಾರತಕ್ಕೆ ಪಾಕಿಸ್ತಾನದ ವಾಯುಮಾರ್ಗವನ್ನು ಮತ್ತು ಆಫ್ಘಾನಿಸ್ತಾನದೊಂದಿಗೆ ಭಾರತದ ವ್ಯಾಪಾರಕ್ಕೆ ಬಳಸುತ್ತಿರುವ ಭೂ ಮಾರ್ಗಕ್ಕೆ ಸಹ ಸಂಪೂರ್ಣ ನಿರ್ಬಂಧ ಹೇರಲು ಪ್ರಧಾನಿ ಯೋಚಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.