ಇಸ್ಲಾಮಾಬಾದ್, ಸೆ.03(Daijiworld News/SS): ಪಾಕಿಸ್ತಾನದ ಬಳಿ ಇರುವ ಅಣು ಬಾಂಬ್'ಗಳ ಮೂಲಕ ಭಾರತದ ನಿರ್ದಿಷ್ಟ ನಗರವನ್ನು ಗುರಿಯನ್ನಾಗಿಸಿಟ್ಟುಕೊಂಡು ಧ್ವಂಸ ಮಾಡಬಹುದು ಎಂದು ಪಾಕ್ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ.
ನಮ್ಮ ಬಳಿ 125-250 ಗ್ರಾಂ ತೂಕದ ಅಣುಬಾಂಬ್ಗಳಿವೆ. ಇವನ್ನು ಪ್ರಯೋಗಿಸುವ ಮೂಲಕ ಭಾರತದ ನಿರ್ದಿಷ್ಟ ನಗರದಲ್ಲಿ ಇಚ್ಛಿಸಿದಷ್ಟು ಪ್ರಮಾಣದ ಹಾನಿಯನ್ನುಂಟು ಮಾಡಬಲ್ಲೆವು. ಪಾಕ್ ಮೇಲೆ ದಾಳಿ ಮಾಡುವ ದುಸ್ಸಾಹಸ ಮಾಡಿದರೆ, ಇಂತಹ ಅನಾಹುತಗಳನ್ನು ಎದುರಿಸುವ ಅನಿವಾರ್ಯತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಿಲುಕಿಕೊಳ್ಳುತ್ತಾರೆ ಎಂದು ಹೇಳಿದರು.
ಕೆಲ ದಿನಗಳ ಹಿಂದಷ್ಟೇ ಶೇಖ್ ರಶೀದ್ ಅಹ್ಮದ್, ಅಕ್ಟೋಬರ್ ಅಥವಾ ಡಿಸೆಂಬರ್ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪೂರ್ಣ ಪ್ರಮಾಣದ ಯುದ್ಧವಾಗುವ ಸಾಧ್ಯತೆ ಹೆಚ್ಚಾಗಿದೆ. ಭಾರತವು ಪಾಕಿಸ್ತಾನದ ಜತೆಗೆ ಯುದ್ಧ ನಡೆಯದಂತೆ ತಡೆಯಬೇಕು. ಹಾಗೊಂದು ವೇಳೆ ಯುದ್ಧವಾದರೆ ಅಣ್ವಸ್ತ್ರ ಹೊಂದಿದ ಎರಡೂ ದೇಶಗಳ ಮಧ್ಯದ ಕೊನೆಯ ಯುದ್ಧ ಇದೇ ಆಗಲಿದೆ ಎಂದು ಹೇಳಿಕೆ ನೀಡಿದ್ದರು.