ಬೀಜಿಂಗ್, ಜೂ. 27 (DaijiworldNews/TA): ಚೀನಾದ ರಾಜಧಾನಿ ಬೀಜಿಂಗ್ನಲ್ಲಿ ಶುಕ್ರವಾರ ಸಂಜೆ ನಡೆದ ಅಪರೂಪದ ವಿಮಾನ ಅಪಘಾತವು ಆತಂಕಕ್ಕೆ ಕಾರಣವಾಗಿದೆ. ನಗರದ ಅತ್ಯಂತ ಎತ್ತರದ ಸಿಐಟಿಐಸಿ ಟವರ್ ಅಥವಾ 'ಚೀನಾ ಜುನ್' ಎಂದು ಕರೆಯಲ್ಪಡುವ 109 ಅಂತಸ್ತಿನ ಗಗನಚುಂಬಿ ಕಟ್ಟಡಕ್ಕೆ ಚೀನಾದಲ್ಲಿ ನಿರ್ಮಿತ ಲಘು ಕ್ರೀಡಾ ವಿಮಾನವೊಂದು ಡಿಕ್ಕಿ ಹೊಡೆದಿದೆ. ಘಟನೆಯ ಬಳಿಕ ಕಟ್ಟಡದ ಮೇಲ್ಭಾಗದ ಗಾಜುಗಳು ಪುಡಿಯಾಗಿ ಕೆಳಗೆ ಬಿದ್ದಿದ್ದು, ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಯಿತು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊಗಳು ಮತ್ತು ಚಿತ್ರಗಳಲ್ಲಿ ಕಟ್ಟಡದ ಮೇಲ್ಭಾಗದಲ್ಲಿ ಹಾನಿಯಾಗಿರುವುದು, ವಿಮಾನದ ಅವಶೇಷಗಳು ಹಾಗೂ ಗಾಜಿನ ತುಂಡುಗಳು ರಸ್ತೆಗೆ ಬಿದ್ದಿರುವುದು ಕಾಣಿಸಿಕೊಂಡಿದೆ. ಅಪಘಾತದ ತಕ್ಷಣವೇ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಕಟ್ಟಡದಲ್ಲಿದ್ದ ನೂರಾರು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಆರಂಭಿಕ ವರದಿಗಳ ಪ್ರಕಾರ, ಸದ್ಯದವರೆಗೆ ಅಧಿಕೃತವಾಗಿ ಸಾವುನೋವುಗಳ ಕುರಿತು ಯಾವುದೇ ಮಾಹಿತಿ ಪ್ರಕಟವಾಗಿಲ್ಲ.
ಅಪಘಾತಕ್ಕೀಡಾದ ವಿಮಾನವನ್ನು ಸನ್ವರ್ಡ್ SA60L ಅರೋರಾ ಮಾದರಿಯ ಎರಡು ಆಸನಗಳ ಲಘು ಕ್ರೀಡಾ ವಿಮಾನ ಎಂದು ಗುರುತಿಸಲಾಗಿದೆ. ಜಾಗತಿಕ ವಿಮಾನ ಟ್ರ್ಯಾಕಿಂಗ್ ಸಂಸ್ಥೆ ಫ್ಲೈಟ್ರಾಡರ್ 24 ನೀಡಿರುವ ಮಾಹಿತಿಯ ಪ್ರಕಾರ, ವಿಮಾನವು ಅಪಘಾತಕ್ಕೂ ಮುನ್ನ ತನ್ನ ನಿಗದಿತ ಹಾರಾಟದ ಮಾರ್ಗದಿಂದ ತೀವ್ರವಾಗಿ ವಿಚಲಿತಗೊಂಡಿತ್ತು. ಆದರೆ ಅದು ಏಕೆ ಮಾರ್ಗ ಬದಲಿಸಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಘಟನೆ ವಿಶೇಷ ಗಮನ ಸೆಳೆದಿರುವ ಮತ್ತೊಂದು ಕಾರಣವೆಂದರೆ, ಬೀಜಿಂಗ್ನಲ್ಲಿ ಸಣ್ಣ ವಿಮಾನಗಳು ಮತ್ತು ಡ್ರೋನ್ಗಳ ಹಾರಾಟದ ಮೇಲೆ ಈಗಾಗಲೇ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿವೆ. ಮೇ 1ರಿಂದ ನಗರವನ್ನು ಡ್ರೋನ್ ಮುಕ್ತ ವಲಯವೆಂದು ಘೋಷಿಸಲಾಗಿದ್ದು, ಸರ್ಕಾರದ ಅನುಮತಿ ಇಲ್ಲದೆ ಯಾವುದೇ ಡ್ರೋನ್ ಅಥವಾ ಸಣ್ಣ ವಿಮಾನಗಳನ್ನು ಕಾರ್ಯಾಚರಣೆ ನಡೆಸಲು ಅವಕಾಶವಿಲ್ಲ.
ಇಷ್ಟೊಂದು ಕಠಿಣ ಭದ್ರತಾ ವ್ಯವಸ್ಥೆಯ ನಡುವೆಯೂ ರಾಜಧಾನಿಯ ಹೃದಯಭಾಗದಲ್ಲಿರುವ ಅತಿ ಎತ್ತರದ ಕಟ್ಟಡಕ್ಕೆ ವಿಮಾನ ಡಿಕ್ಕಿ ಹೊಡೆದಿರುವುದು ಚೀನಾ ಆಡಳಿತಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ಆರಂಭವಾಗಿದ್ದು, ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚುವ ಪ್ರಯತ್ನಗಳು ಮುಂದುವರಿದಿವೆ.