ವಾಷಿಂಗ್ಟನ್, ಜೂ. 28 (DaijiworldNews/TA): ಎರಡು ವಾರಗಳ ಹಿಂದೆ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದರೂ, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ತೀವ್ರಗೊಂಡಿದೆ. ಪನಾಮಾ ಧ್ವಜ ಹೊಂದಿದ್ದ ತೈಲ ಟ್ಯಾಂಕರ್ ಮೇಲೆ ಡ್ರೋನ್ ದಾಳಿ ನಡೆದಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದಂತೆ ಅಮೇರಿಕಾ ಸೇನೆ ಇರಾನ್ನ ಹಲವು ಸೇನಾ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ.

ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ (CENTCOM) ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಹೋರ್ಮುಜ್ ಜಲಸಂಧಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಇರಾನ್ನ 10 ಪ್ರಮುಖ ಸೇನಾ ಗುರಿಗಳ ಮೇಲೆ ಯುದ್ಧ ವಿಮಾನಗಳ ಮೂಲಕ ದಾಳಿ ನಡೆಸಲಾಗಿದೆ. ಕಾರ್ಯಾಚರಣೆಯ ವಿಡಿಯೊವನ್ನು CENTCOM ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
'ಕಿಕು' ಹೆಸರಿನ ಪನಾಮಾ ಧ್ವಜ ಹೊಂದಿದ್ದ ತೈಲ ಟ್ಯಾಂಕರ್ ಮೇಲೆ ಇರಾನ್ ಏಕಮುಖ ಡ್ರೋನ್ ಮೂಲಕ ದಾಳಿ ನಡೆಸಿದೆ ಎಂದು ಅಮೆರಿಕ ಆರೋಪಿಸಿದೆ. ಸುಮಾರು 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಹೊತ್ತೊಯ್ಯುತ್ತಿದ್ದ ಈ ಹಡಗು, ವಾರದ ಆರಂಭದಲ್ಲಿ ಕತಾರ್ನ ತೈಲ ಕ್ಷೇತ್ರದಿಂದ ಹೊರಟು, ಒಮಾನ್ ಕೊಲ್ಲಿಯ ಮೂಲಕ ಯುನೈಟೆಡ್ ಅರಬ್ ಎಮಿರೇಟ್ಸ್ನ ಬಂದರಿನತ್ತ ಸಾಗುತ್ತಿತ್ತು ಎಂದು ತಿಳಿದುಬಂದಿದೆ.
ಅಮೆರಿಕದ ದಾಳಿಯಲ್ಲಿ ಇರಾನ್ನ ಸೇನಾ ಕಣ್ಗಾವಲು ವ್ಯವಸ್ಥೆಗಳು, ಸಂವಹನ ಜಾಲ, ವಾಯು ರಕ್ಷಣಾ ಕೇಂದ್ರಗಳು, ಡ್ರೋನ್ ಸಂಗ್ರಹಣಾ ತಾಣಗಳು ಹಾಗೂ ಸಮುದ್ರದಲ್ಲಿ ಸ್ಫೋಟಕ ಅಳವಡಿಸುವ ಸಾಮರ್ಥ್ಯ ಹೊಂದಿದ್ದ ಮೂಲಸೌಕರ್ಯಗಳನ್ನು ಗುರಿಯಾಗಿಸಲಾಗಿದೆ ಎಂದು CENTCOM ತಿಳಿಸಿದೆ.
ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. "ಅವರು ಬಹುಶಃ ಎಂದಿಗೂ ಪಾಠ ಕಲಿಯುವುದಿಲ್ಲ. ಅಮೆರಿಕದ ತಾಳ್ಮೆ ಪರೀಕ್ಷಿಸಿದರೆ, ನಾವು ಆರಂಭಿಸಿರುವ ಕಾರ್ಯಾಚರಣೆಯನ್ನು ಸಂಪೂರ್ಣ ಸೇನಾ ಕ್ರಮವಾಗಿ ಮುಂದುವರಿಸಬೇಕಾಗಬಹುದು. ಹಾಗಾದರೆ ಇರಾನ್ ಇಸ್ಲಾಮಿಕ್ ಗಣರಾಜ್ಯದ ಅಸ್ತಿತ್ವವೇ ಅಪಾಯಕ್ಕೆ ಸಿಲುಕಬಹುದು" ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಇರಾನ್ಗೆ ಎಚ್ಚರಿಕೆ ನೀಡಿದ್ದು, ಕದನ ವಿರಾಮದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ. "ಇರಾನ್ ಹಿಂಸೆಯ ಮಾರ್ಗವನ್ನು ಆರಿಸಿಕೊಂಡರೆ, ಅದಕ್ಕೆ ಅದೇ ರೀತಿಯ ಪ್ರತಿಕ್ರಿಯೆ ನೀಡಲಾಗುತ್ತದೆ" ಎಂದು ವ್ಯಾನ್ಸ್ ಸ್ಪಷ್ಟಪಡಿಸಿದ್ದಾರೆ.
ಉದ್ವಿಗ್ನ ಪರಿಸ್ಥಿತಿ ನಡುವೆಯೂ, ಹೋರ್ಮುಜ್ ಜಲಸಂಧಿ ಮೂಲಕ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಭದ್ರತೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಮಾತುಕತೆಗಳು ಮುಂದುವರಿದಿವೆ ಎಂದು ವರದಿಯಾಗಿದೆ. ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮಾರುಕಟ್ಟೆ ಮತ್ತು ಸಾಗಾಣಿಕೆ ಭದ್ರತೆ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.