ಕ್ಯಾರಕಾಸ್, ಜೂ. 28 (DaijiworldNews/TA): ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪದ ನಡುವೆ ತಾಯಿಯ ಪ್ರೀತಿಗೆ ಸಾಕ್ಷಿಯಾದ ಮನಕಲುಕುವ ಘಟನೆ ಬೆಳಕಿಗೆ ಬಂದಿದೆ. ಪ್ರಸಿದ್ಧ ಫುಟ್ಬಾಲ್ ಆಟಗಾರ ಹೆಕ್ಟರ್ ಬೆಲ್ಲೊ ಅವರ ಪತ್ನಿ ಆಂಡ್ರಿಯಾ ಬೆಲ್ಲೊ ತಮ್ಮ ಒಂದು ವರ್ಷದ ಮಗಳು ಅಲಾನಾಳನ್ನು ರಕ್ಷಿಸುವ ವೇಳೆ ಪ್ರಾಣತ್ಯಾಗ ಮಾಡಿದ್ದಾರೆ.

ಭೂಕಂಪದ ತೀವ್ರತೆಗೆ ಅವರ ನಿವಾಸವಾಗಿದ್ದ ಅಪಾರ್ಟ್ಮೆಂಟ್ ಕಟ್ಟಡ ಕುಸಿದು ಬಿದ್ದಿದ್ದು, ಆಂಡ್ರಿಯಾ ಮತ್ತು ಮಗಳು ಅವಶೇಷಗಳಡಿ ಸಿಲುಕಿಕೊಂಡಿದ್ದರು. ರಕ್ಷಣಾ ಸಿಬ್ಬಂದಿ ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಅವಶೇಷಗಳನ್ನು ತೆರವುಗೊಳಿಸಿದಾಗ, ಆಂಡ್ರಿಯಾ ತಮ್ಮ ಮಗಳನ್ನು ಎದೆಗೆ ಬಿಗಿಯಾಗಿ ಅಪ್ಪಿಕೊಂಡ ಸ್ಥಿತಿಯಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ.
ತಾಯಿಯ ರಕ್ಷಣಾತ್ಮಕ ನಡೆ ಕಾರಣ, ಅವರ ಮಡಿಲಲ್ಲಿದ್ದ ಒಂದು ವರ್ಷದ ಪುಟ್ಟ ಅಲಾನಾ ಪವಾಡ ಸದೃಶವಾಗಿ ಬದುಕುಳಿದಿದ್ದಾಳೆ. ರಕ್ಷಣಾ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ಹೊರತೆಗೆದು ವೈದ್ಯಕೀಯ ಚಿಕಿತ್ಸೆಗೆ ದಾಖಲಿಸಿದ್ದಾರೆ. ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರಂತದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ತಾಯಿಯ ತ್ಯಾಗಕ್ಕೆ ವಿಶ್ವದಾದ್ಯಂತ ಜನರು ಕಂಬನಿ ಮಿಡಿದಿದ್ದಾರೆ. "ತಾಯಿಯ ಪ್ರೀತಿ ಮತ್ತು ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ" ಎಂದು ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ವೆನೆಜುವೆಲಾದ ಭೂಕಂಪ ದುರಂತದಲ್ಲಿ ಹಲವು ಕಟ್ಟಡಗಳು ಕುಸಿದಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಮೃತರ ಸಂಖ್ಯೆ ಹಾಗೂ ಹಾನಿಯ ಪ್ರಮಾಣದ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.