ಕಾಬೂಲ್, ಜೂ. 29 (DaijiworldNews/AA): ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ್ ಗಡಿ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಭದ್ರತಾ ಪಡೆಗಳು ನಡೆಸಿದ ಭೀಕರ ಭೂ ಕಾರ್ಯಾಚರಣೆಯಲ್ಲಿ ಮಕ್ಕಳು, ವೃದ್ಧರು ಸೇರಿದಂತೆ 35 ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ.

ಇತ್ತೀಚೆಗಷ್ಟೇ ಪಾಕಿಸ್ತಾನದ ಕರಾಚಿಯಲ್ಲಿರುವ ಪಾಕಿಸ್ತಾನ ರೇಂಜರ್ಸ್ ಪ್ರಾದೇಶಿಕ ಪ್ರಧಾನ ಕಚೇರಿಯ ಮೇಲೆ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಯನ್ನು ಅಫ್ಘಾನಿಸ್ತಾನ ಮೂಲದ ಉಗ್ರಗಾಮಿಗಳೇ ಮಾಡಿದ್ದಾರೆ ಎಂದು ಪಾಕ್ ಸರ್ಕಾರ ಗಂಭೀರವಾಗಿ ಆರೋಪಿಸಿತ್ತು. ಈ ಉಗ್ರರ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಭದ್ರತಾ ಪಡೆಗಳು ಅಫ್ಘಾನ್ ಗಡಿಯುದ್ದಕ್ಕೂ ಕಾರ್ಯಾಚರಣೆ ಕೈಗೊಂಡಿದ್ದವು.
ಈ ಕಾರ್ಯಾಚರಣೆಯ ವೇಳೆ ಗಡಿ ಭಾಗದಲ್ಲಿ ಪಾಕ್ ಪಡೆಗಳು ನಡೆಸಿದ ಗುಂಡಿನ ದಾಳಿಗಳಿಗೆ ಸಿಲುಕಿ 35 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ ಹೆಚ್ಚಿನವರು ಮಕ್ಕಳು ಮತ್ತು ವೃದ್ಧರು ಎಂದು ವರದಿಯಾಗಿದೆ. ಆದರೆ, ಈ ದಾಳಿಯನ್ನು ಸಮರ್ಥಿಸಿಕೊಂಡಿರುವ ಪಾಕಿಸ್ತಾನ ಸೇನೆ, ತಾನು ನಡೆಸಿದ ಕಾರ್ಯಾಚರಣೆಯಲ್ಲಿ ಗಡಿಯಾಚೆಗಿನ ಭದ್ರತೆಗೆ ಭಂಗ ತರುತ್ತಿದ್ದ ೩೫ ಮಂದಿಯನ್ನು ಹತ್ಯೆ ಮಾಡಿರುವುದಾಗಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಈ ಘಟನೆಯಿಂದ ಇಸ್ಲಾಮಾಬಾದ್ ಮತ್ತು ಕಾಬೂಲ್ ನಡುವಿನ ರಾಜತಾಂತ್ರಿಕ ಹಾಗೂ ಗಡಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಳಿಸಿದೆ. ಅಫ್ಘಾನಿಸ್ತಾನದ ಆಡಳಿತವು ತನ್ನ ನಾಗರಿಕರ ಸಾವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗಡಿಯಲ್ಲಿ ಸೇನಾ ಪಡೆಗಳನ್ನು ಜಮಾಯಿಸುತ್ತಿದೆ. ಇನ್ನು ಗಡಿಯುದ್ದಕ್ಕೂ ಹೈ ಅಲರ್ಟ್ ಘೋಷಿಸಲಾಗಿದೆ.