ವಿಕ್ಟೋರಿಯಾ, ಜೂ. 29 (DaijiworldNews/TA): ಪ್ರಧಾನಿ ನರೇಂದ್ರ ಮೋದಿ ಅವರ ಸೆಶೆಲ್ಸ್ ಭೇಟಿ ಭಾರತ-ಸೆಶೆಲ್ಸ್ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ಬಲ ತುಂಬಿದ್ದು, ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ರಾಜತಾಂತ್ರಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಸೆಶೆಲ್ಸ್ ಪ್ರವಾಸದ ವೇಳೆ ಪ್ರಧಾನಿ ಮೋದಿ ಮಹಾತ್ಮಾ ಗಾಂಧೀಜಿಗೆ ಗೌರವ ನಮನ ಸಲ್ಲಿಸುವುದರ ಜೊತೆಗೆ ಐತಿಹಾಸಿಕ ಅರುಲ್ಮಿಗು ನವಶಕ್ತಿ ವಿನಾಯಗರ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಸೋಮವಾರ ಸೆಶೆಲ್ಸ್ ರಾಜಧಾನಿ ವಿಕ್ಟೋರಿಯಾದ ಪೀಸ್ ಪಾರ್ಕ್ಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಅಲ್ಲಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡ ಅವರು, "ವಿಕ್ಟೋರಿಯಾದ ಪೀಸ್ ಪಾರ್ಕ್ನಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸಿದ್ದೇನೆ" ಎಂದು ತಿಳಿಸಿದ್ದಾರೆ.
ಬಳಿಕ ಸೆಶೆಲ್ಸ್ನ ಪ್ರಮುಖ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಅರುಲ್ಮಿಗು ನವಶಕ್ತಿ ವಿನಾಯಗರ್ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ, ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಹಾಗೂ ಸೆಶೆಲ್ಸ್ನಲ್ಲಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಸೆಶೆಲ್ಸ್ ಹಿಂದೂ ಕೋವಿಲ್ ಸಂಗಮ್ ಸಂಸ್ಥೆಯ ಕಾರ್ಯವನ್ನು ಪ್ರಧಾನಿ ಮುಕ್ತಕಂಠದಿಂದ ಪ್ರಶಂಸಿಸಿದರು.
"ಈ ಭವ್ಯ ದೇವಸ್ಥಾನದ ನಿರ್ಮಾಣ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯನ್ನು ಸೆಶೆಲ್ಸ್ನಲ್ಲಿ ಜನಪ್ರಿಯಗೊಳಿಸುವಲ್ಲಿ ಸೆಶೆಲ್ಸ್ ಹಿಂದೂ ಕೋವಿಲ್ ಸಂಗಮ್ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದಕ್ಕೂ ಮುನ್ನ ಭಾನುವಾರ ನಡೆದ ಸೆಶೆಲ್ಸ್ನ 50ನೇ ಸ್ವಾತಂತ್ರ್ಯೋತ್ಸವ ಹಾಗೂ ರಾಷ್ಟ್ರೀಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಸೆಶೆಲ್ಸ್ನ ಅಭಿವೃದ್ಧಿ ಪಯಣವನ್ನು ಶ್ಲಾಘಿಸಿದ ಅವರು, ಕಳೆದ ಐದು ದಶಕಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಪ್ರಧಾನಿ, "ಕಳೆದ 50 ವರ್ಷಗಳಲ್ಲಿ ಸೆಶೆಲ್ಸ್ ಜನರ ಅಭಿವೃದ್ಧಿಯ ಪಯಣ ನಿಜಕ್ಕೂ ಶ್ಲಾಘನೀಯ. ಸೆಶೆಲ್ಸ್ನ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಅತ್ಯಂತ ವಿಶ್ವಾಸಾರ್ಹ ಸ್ನೇಹಿತ ಹಾಗೂ ಪಾಲುದಾರನಾಗಿ ಭಾರತ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲು ಹೆಮ್ಮೆಪಡುತ್ತದೆ" ಎಂದು ಹೇಳಿದ್ದಾರೆ.