ಸಿಂಗಾಪುರ, ಜು. 03 (DaijiworldNews/AA): ಪಾಕಿಸ್ತಾನದ ಇಂದಿನ ದುಸ್ಥಿತಿಯು ಅದರ ಸ್ವಯಂಕೃತ ಅಪರಾಧವೇ ಹೊರತು, ಭಾರತ ಅಥವಾ ಅಫ್ಘಾನಿಸ್ತಾನದೊಂದಿಗಿನ ಉದ್ವಿಗ್ನತೆಯಿಂದ ಉಂಟಾದದ್ದಲ್ಲ. ಪಾಕಿಸ್ತಾನ ಪತನದ ಅಂಚಿನಲ್ಲಿ ತತ್ತರಿಸುತ್ತಿರುವ ದೇಶ ಎಂದು ಸಿಂಗಾಪುರದ ಮಾಜಿ ರಾಯಭಾರಿ ಬಿಲಹರಿ ಕೌಶಿಕನ್ ವಾಗ್ದಾಳಿ ನಡೆಸಿದ್ದಾರೆ.

ಜಾಗತಿಕ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು, "ಪಾಕಿಸ್ತಾನದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟುಗಳಿಗೆ ಅಲ್ಲಿನ ಮಿಲಿಟರಿ ಮತ್ತು ರಾಜಕೀಯ ನಾಯಕತ್ವವೇ ನೇರ ಹೊಣೆ. ಇತ್ತೀಚಿನ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸುವ ಮೂಲಕ ಪಾಕಿಸ್ತಾನವು ಪಡೆದಿರುವ ರಾಜತಾಂತ್ರಿಕ ಯಶಸ್ಸು, ಅಲ್ಲಿನ ಹದಗೆಡುತ್ತಿರುವ ಆರ್ಥಿಕತೆ ಮತ್ತು ಆಡಳಿತಾತ್ಮಕ ಸವಾಲುಗಳನ್ನು ಎದುರಿಸಲು ಯಾವುದೇ ರೀತಿಯಲ್ಲೂ ಸಹಾಯ ಮಾಡುವುದಿಲ್ಲ" ಎಂದು ತಿಳಿಸಿದರು.
"ಪಾಕಿಸ್ತಾನದ ಸಮಸ್ಯೆಗಳು ಅದರ ನೆರೆಹೊರೆಯವರಿಂದ ಬಂದಿದ್ದಲ್ಲ, ಬದಲಿಗೆ ಅದರದೇ ಆದ ಆಡಳಿತ ವೈಫಲ್ಯದಿಂದ ಹುಟ್ಟಿಕೊಂಡಿದ್ದು. ಕಳಪೆ ಆಡಳಿತ ಮತ್ತು ರಾಷ್ಟ್ರೀಯ ಆಂತರಿಕ ವ್ಯವಹಾರಗಳಲ್ಲಿ ಮಿಲಿಟರಿಯ ಅತಿಯಾದ ಹಸ್ತಕ್ಷೇಪವೇ ಪಾಕಿಸ್ತಾನದ ದೀರ್ಘಕಾಲದ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಮೂಲ ಕಾರಣ. ಪಾಕಿಸ್ತಾನವನ್ನು ಮೊದಲಿನಿಂದಲೂ ಅತ್ಯಂತ ಭೀಕರವಾಗಿ ಅಸಮರ್ಪಕವಾಗಿ ನಿರ್ವಹಣೆ ಮಾಡಲಾಗಿದೆ. ಇದಕ್ಕೆ ಯಾವುದೇ ಪರಿಹಾರ ನನಗೆ ಕಾಣಿಸುತ್ತಿಲ್ಲ. ಯಾವುದೇ ಪಕ್ಷ ಇರಲಿ, ಅಲ್ಲಿನ ರಾಜಕಾರಣಿಗಳು ಕೇವಲ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿನ ಮಿಲಿಟರಿ ವ್ಯವಸ್ಥೆಯು ಈ ಸಮಸ್ಯೆಯ ಬಹುದೊಡ್ಡ ಭಾಗವಾಗಿದೆ" ಎಂದು ಅವರು ಅಭಿಪ್ರಾಯಪಟ್ಟರು.
"ಇತ್ತೀಚಿನ ಅಮೆರಿಕ-ಇರಾನ್ ಸಂಘರ್ಷದಲ್ಲಿ ಮಧ್ಯಂತರ ಶಾಂತಿ ಒಪ್ಪಂದ ಏರ್ಪಡುವಂತೆ ಮಧ್ಯಸ್ಥಿಕೆ ವಹಿಸುವ ಮೂಲಕ ಪಾಕಿಸ್ತಾನವು ಜಾಗತಿಕ ಮಟ್ಟದಲ್ಲಿ ತನ್ನ ಇಮೇಜ್ ಅನ್ನು ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡಿರಬಹುದು. ಆದರೆ ಈ ಸಾಧನೆಯು ಸಾಮಾನ್ಯ ಪಾಕಿಸ್ತಾನಿಗಳ ಜೀವನವನ್ನು ಉತ್ತಮಗೊಳಿಸುವುದಿಲ್ಲ" ಎಂದರು.
"ರಾಜತಾಂತ್ರಿಕ ಅವಕಾಶದ ಲಾಭವನ್ನು ಪಡೆದುಕೊಳ್ಳುವಲ್ಲಿ ಪಾಕಿಸ್ತಾನವು ಅತ್ಯಂತ ಚುರುಕಾಗಿ ಮತ್ತು ಯಶಸ್ವಿಯಾಗಿ ಕಾರ್ಯನಿರ್ವಹಿಸಿತು. ಇದು ಅಮೆರಿಕದ ದೃಷ್ಟಿಯಲ್ಲಿ ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಮರುಸ್ಥಾಪಿಸಲು ಸ್ವಲ್ಪಮಟ್ಟಿಗೆ ಸಹಾಯ ಮಾಡಿದೆ ಎಂಬುದು ನಿಜ. ಆದರೆ, ನೆನಪಿಡಿ, ಆ ಯಶಸ್ಸು ಪಾಕಿಸ್ತಾನದ ಜನರಿಗೆ ಅನ್ನ ನೀಡುವುದಿಲ್ಲ" ಎಂದು ಹೇಳಿದರು.
"ಪಾಕಿಸ್ತಾನವು ತನ್ನ ಇತಿಹಾಸದ ಅರ್ಧದಷ್ಟು ಅವಧಿಯನ್ನು ನೇರವಾಗಿ ಮಿಲಿಟರಿ ಆಡಳಿತದಲ್ಲೇ ಕಳೆದಿದೆ. ನಾಗರಿಕ ಸರ್ಕಾರದ ಅವಧಿಯಲ್ಲೂ ಮಿಲಿಟರಿಯ ನೆರಳು ಆಡಳಿತದ ಮೇಲಿರುತ್ತದೆ ಎಂಬುದು ಜಗತ್ತಿಗೆ ತಿಳಿದಿರುವ ವಿಚಾರವಾಗಿದೆ. ಆ ಮಿಲಿಟರಿಯಿಂದಲೇ ಇದೀಗ ಪಾಕಿಸ್ತಾನ ಪತನದ ಅಂಚಿಗೆ ತಲುಪಿದೆ" ಎಂದು ವಿವರಿಸಿದರು.
"ಇತ್ತೀಚಿನ ರಾಜತಾಂತ್ರಿಕ ಯಶಸ್ಸುಗಳು ದೇಶದ ಮೂಲಭೂತ ರಚನಾತ್ಮಕ ಸಮಸ್ಯೆಗಳನ್ನು ಬದಲಾಯಿಸುವುದಿಲ್ಲ ಅಥವಾ ಅಮೆರಿಕದೊಂದಿಗಿನ ಅದರ ಸಂಬಂಧವನ್ನು ದೀರ್ಘಾವಧಿಯಲ್ಲಿ ಸಂಪೂರ್ಣವಾಗಿ ಸುಧಾರಿಸುವುದಿಲ್ಲ. ಅಮೆರಿಕವು ಪಾಕಿಸ್ತಾನದ ಮೇಲಿರುವ ಎಲ್ಲಾ ನಿರ್ಬಂಧಗಳನ್ನು ಸದ್ಯಕ್ಕಂತೂ ತೆಗೆದುಹಾಕುವುದಿಲ್ಲ. ಪಾಕಿಸ್ತಾನದ ಬಳಿ ಅಣ್ವಸ್ತ್ರಗಳು ಇರುವುದರಿಂದ ಎಲ್ಲರೂ ಇದರ ಬಗ್ಗೆ ಚಿಂತಿತರಾಗಿದ್ದಾರೆ. ಅವರ ಬಳಿ ಅಣ್ವಸ್ತ್ರಗಳೇ ಇಲ್ಲದಿದ್ದರೆ, ಯಾರೂ ಪಾಕಿಸ್ತಾನವನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ" ಎಂದು ಲೇವಡಿ ಮಾಡಿದರು.