ವಾಷಿಂಗ್ಟನ್, ಜು. 05 (DaijiworldNews/TA): ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಇರಾನ್ ವಿರುದ್ಧ ಕಠಿಣ ಹೇಳಿಕೆ ನೀಡಿ ಉದ್ವಿಗ್ನತೆಯನ್ನು ಹೆಚ್ಚಿಸಿದ್ದಾರೆ. ಇರಾನ್ನ ನಾಯಕತ್ವವನ್ನು ಗುರಿಯಾಗಿಸುವ ಸಾಮರ್ಥ್ಯ ಅಮೆರಿಕಕ್ಕಿದೆ ಎಂದು ಹೇಳಿರುವ ಟ್ರಂಪ್, ರಾಜತಾಂತ್ರಿಕ ಮಾತುಕತೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಅಂಥ ಕ್ರಮಕ್ಕೆ ಮುಂದಾಗಿಲ್ಲ ಎಂದು ತಿಳಿಸಿದ್ದಾರೆ.

ಆಕ್ಸಿಯಾಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, "ಇರಾನ್ನ ಉನ್ನತ ನಾಯಕರು ಒಂದೇ ಸ್ಥಳದಲ್ಲಿ ಇದ್ದರೆ, ಬಯಸಿದರೆ ಒಂದೇ ದಾಳಿಯಲ್ಲಿ ಅವರನ್ನು ಗುರಿಯಾಗಿಸಬಹುದು. ಆದರೆ ಹಾಗೆ ಮಾಡಿದರೆ ನಂತರ ಮಾತುಕತೆ ನಡೆಸಲು ಯಾರೂ ಉಳಿಯುವುದಿಲ್ಲ" ಎಂದು ಹೇಳಿದ್ದಾರೆ.
ಇರಾನ್ನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಅಮೆರಿಕದೊಂದಿಗೆ ಒಪ್ಪಂದಕ್ಕೆ ಬರಲು ಟೆಹ್ರಾನ್ ಆಸಕ್ತಿ ತೋರಿಸುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ರಾಜತಾಂತ್ರಿಕ ಪ್ರಯತ್ನಗಳು ಯಶಸ್ವಿಯಾದರೆ ಅಮೆರಿಕ ಮತ್ತು ಇರಾನ್ ನಡುವಿನ ಆರ್ಥಿಕ ಸಹಕಾರಕ್ಕೂ ಅವಕಾಶವಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಟ್ರಂಪ್ ಅವರ ಹೇಳಿಕೆಗೆ ಇರಾನ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಮೆರಿಕ ಅಧ್ಯಕ್ಷರ ಹೇಳಿಕೆಗಳು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವಂತಿವೆ ಎಂದು ಇರಾನ್ ಟೀಕಿಸಿದೆ. ಯಾವುದೇ ಹೊಸ ಮಿಲಿಟರಿ ದಾಳಿ ಅಥವಾ ಪ್ರಚೋದನೆ ನಡೆದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಇರಾನ್ನ ಮಿಲಿಟರಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ರಾಜಕೀಯ ಉದ್ವಿಗ್ನತೆ ನಡುವೆಯೂ ಕತಾರ್ನ ದೋಹಾದಲ್ಲಿ ಅಮೆರಿಕ ಮತ್ತು ಇರಾನ್ ಅಧಿಕಾರಿಗಳ ನಡುವೆ ಪರೋಕ್ಷ ಮಾತುಕತೆಗಳು ಮುಂದುವರಿದಿವೆ. ಸಮುದ್ರ ಭದ್ರತೆ, ಆರ್ಥಿಕ ಸಹಕಾರ ಹಾಗೂ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆಗಳು ನಡೆಯುತ್ತಿದ್ದು, ಕೆಲವು ವಿಷಯಗಳಲ್ಲಿ ಪ್ರಗತಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಇರಾನ್ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಮುಖ ಭಿನ್ನಾಭಿಪ್ರಾಯಗಳು ಇನ್ನೂ ಬಗೆಹರಿದಿಲ್ಲ. ಮುಂದಿನ ಸುತ್ತಿನ ಮಾತುಕತೆಯಲ್ಲಿ ಈ ವಿಚಾರಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯುವ ಸಾಧ್ಯತೆ ಇದೆ.