ಜೆರುಸಲೇಂ, ಜು. 06 (DaijiworldNews/AA): ಜಗತ್ತಿನಲ್ಲಿ ನಮಗೆ ಭಾರತದಂತಹ ಇನ್ನೂ ಹಲವು ಆಪ್ತ ದೇಶಗಳ ಬೆಂಬಲವಿದೆ ಎಂದು ಹೇಳುವ ಮೂಲಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಡೀ ವಿಶ್ವದಲ್ಲಿ ಇಸ್ರೇಲ್ಗೆ ಇರುವ ಏಕೈಕ ಶಕ್ತಿಶಾಲಿ ಮಿತ್ರ ರಾಷ್ಟ್ರ ಅಮೆರಿಕ ಮಾತ್ರ ಎಂಬ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿಕೆಯನ್ನು ಅವರು ತಳ್ಳಿ ಹಾಕಿದ್ದಾರೆ.

"ನಾನು ಜೆಡಿ ವ್ಯಾನ್ಸ್ ಅವರನ್ನು ಗೌರವಿಸುತ್ತೇನೆ. ಆದರೆ ಅವರು ಹೇಳುವ ಎಲ್ಲ ಮಾತುಗಳನ್ನೂ ನಾನು ಒಪ್ಪಲು ಸಾಧ್ಯವಿಲ್ಲ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ನ ಅತ್ಯುತ್ತಮ ಸ್ನೇಹಿತ ಎಂಬುದರಲ್ಲಿ ಸಂಶಯವಿಲ್ಲ. ಆದರೆ ನಮಗೆ ಭಾರತದಂತಹ ಇತರ ಕೆಲವು ಶಕ್ತಿಶಾಲಿ ಸ್ನೇಹಿತರೂ ಇದ್ದಾರೆ" ಎಂದು ತಿಳಿಸಿದ್ದಾರೆ.
"ಭಾರತವು 140 ಕೋಟಿ ಜನಸಂಖ್ಯೆ ಹೊಂದಿರುವ ದೇಶ. ಅಲ್ಲಿಂದ ಇಸ್ರೇಲ್ಗೆ ಸಿಗುತ್ತಿರುವ ಬೆಂಬಲ ಅಪಾರವಾದದ್ದು. ನನ್ನ ಫೇಸ್ಬುಕ್ ಖಾತೆಯನ್ನು ನೋಡಿದರೆ ಸಾಕು, ಭಾರತದ ಜನರು ನಮ್ಮ ಮೇಲೆ ತೋರುತ್ತಿರುವ ಅಗಾಧವಾದ ಪ್ರೀತಿ ಮತ್ತು ಬೆಂಬಲದ ಪ್ರವಾಹ ನಮಗೆ ಅರ್ಥವಾಗುತ್ತದೆ" ಎಂದಿದ್ದಾರೆ.