ವಾಷಿಂಗ್ಟನ್, ಜು. 07 (DaijiworldNews/AK): ಇರಾನ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇರಾನ್ ನಮ್ಮೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ನಾವು ಅದರ ಕಥೆ ಮುಗಿಸುತ್ತೇವೆ ಎಂದು ನೇರವಾಗಿಯೇ ಬೆದರಿಕೆ ಹಾಕಿದ್ದಾರೆ. ಇರಾನ್ನ ಪ್ರಮುಖ ತೈಲ ಮತ್ತು ವಿದ್ಯುತ್ ಮೂಲಸೌಕರ್ಯಗಳನ್ನು ಕೆಲವೇ ಗಂಟೆಗಳಲ್ಲಿ ಧೂಳೀಪಟ ಮಾಡುವ ಶಕ್ತಿ ಅಮೆರಿಕಕ್ಕಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಸೋಮವಾರ ಪ್ರಮುಖ ಜಂಟಿ ಸಭೆಯೊಂದರಲ್ಲಿ ಮಾತನಾಡಿದ ಟ್ರಂಪ್, ತಮಗೆ ಯುದ್ಧಕ್ಕಿಂತ ಮಾತುಕತೆಯ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳುವ ಇಚ್ಛೆಯಿದೆ ಎಂದು ಹೇಳಿದರು. ನಾನು ಶಾಂತಿಯುತ ಇತ್ಯರ್ಥವನ್ನು ಬಯಸುತ್ತೇನೆ. ಇರಾನ್ನ 9.1 ಕೋಟಿ ಜನರ ಮೇಲೆ ದಾಳಿ ನಡೆಸಲು ನನಗೆ ಇಷ್ಟವಿಲ್ಲ. ಆದರೆ ಅವರು ಒಪ್ಪದಿದ್ದರೆ, ಕೇವಲ ಒಂದು ಗಂಟೆಯಲ್ಲಿ ಇರಾನ್ನ ಎಲ್ಲಾ ಪ್ರಮುಖ ಸೇತುವೆಗಳನ್ನು ನಾವು ಧ್ವಂಸ ಮಾಡಬಲ್ಲೆವು. ಅವರ ಇಂಧನ ಪೂರೈಕೆ, ಆಧುನಿಕ ತೈಲ ಸ್ಥಾವರಗಳು ಮತ್ತು ಇಡೀ ವಿದ್ಯುತ್ ವ್ಯವಸ್ಥೆಯನ್ನು ಮಧ್ಯಾಹ್ನದೊಳಗಾಗಿ ನಾವು ಉಡೀಸ್ ಮಾಡಬಹುದು. ಈ ಶಕ್ತಿ ನಮಗಿದೆ ಎಂಬುದು ಇರಾನ್ಗೂ ಚೆನ್ನಾಗಿ ಗೊತ್ತು ಎಂದಿದ್ದಾರೆ.
ಒಂದೇ ದಾಳಿಗೆ ಇರಾನ್ ನಾಯಕರು ಖಲಾಸ್ ಆಗುತ್ತಿದ್ದರು ಇತ್ತೀಚೆಗೆ ಆಕ್ಸಿಯಾಸ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಮತ್ತೊಂದು ಆಘಾತಕಾರಿ ವಿಷಯ ಹಂಚಿಕೊಂಡಿದ್ದರು. ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದರು. ಅವರ ಅಂತ್ಯಕ್ರಿಯೆಗಾಗಿ ಇರಾನ್ನ ಉಳಿದ ಎಲ್ಲಾ ಉನ್ನತ ನಾಯಕರು ಒಂದೆಡೆ ಸೇರಿದ್ದರು.
ಅವರೆಲ್ಲರೂ ಒಂದೇ ಜಾಗದಲ್ಲಿದ್ದರು, ನಾವು ಮನಸ್ಸು ಮಾಡಿದ್ದರೆ ಒಂದೇ ದಾಳಿಯಲ್ಲಿ ಇರಾನ್ನ ಇಡೀ ನಾಯಕತ್ವವನ್ನೇ ನಿರ್ಮೂಲನೆ ಮಾಡಬಹುದಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ, ಏಕೆಂದರೆ ಇರಾನ್ನ ಎಲ್ಲರನ್ನೂ ಮುಗಿಸಿದರೆ ಮುಂದೆ ನಮ್ಮ ಜೊತೆ ಮಾತುಕತೆ ನಡೆಸಲು ಯಾರೂ ಉಳಿಯುತ್ತಿರಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.