ವಾಷಿಂಗ್ಟನ್, ಜು. 08 (DaijiworldNews/AA): ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಮೂರು ವಾಣಿಜ್ಯ ಸರಕು ಹಡಗುಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ್ದು, ಇದಕ್ಕೆ ಪ್ರತೀಕಾರವಾಗಿ ಅಮೆರಿಕ ಸೇನೆಯು ಬುಧವಾರ ಮುಂಜಾನೆ ಇರಾನ್ ವಿರುದ್ಧ ಅತ್ಯಂತ ಪ್ರಬಲ ಮತ್ತು ಭೀಕರ ವಾಯುದಾಳಿ ಆರಂಭಿಸಿದೆ.

ಅಮೆರಿಕದ ಮಿಲಿಟರಿ ಕಮಾಂಡ್ ಈ ದಾಳಿಯನ್ನು ಅಧಿಕೃತವಾಗಿ ದೃಢಪಡಿಸಿದೆ. ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಮುಗ್ಧ ನಾಗರಿಕರಿರುವ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ. ಇದಕ್ಕೆ ಇರಾನ್ ಭಾರಿ ಬೆಲೆ ತೆರುವಂತೆ ಮಾಡಲು ಅಮೆರಿಕ ಸೇನೆಯು ಪ್ರಬಲ ದಾಳಿಗಳನ್ನು ಆರಂಭಿಸಿದೆ. ಇರಾನ್ನ ಈ ಆಕ್ರಮಣವು ಅನಗತ್ಯ, ಅಪಾಯಕಾರಿ ಮತ್ತು ಉಭಯ ದೇಶಗಳ ನಡುವಿನ ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ.
ಈ ಬಾರಿ ಇರಾನ್ ಒಳಗಿರುವ ಕನಿಷ್ಠ 80ಕ್ಕೂ ಹೆಚ್ಚು ಆಯಕಟ್ಟಿನ ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಇದು ಕಳೆದ ಜೂನ್ನಲ್ಲಿ ನಡೆದ ದಾಳಿಗಿಂತ ೮ ಪಟ್ಟು ಹೆಚ್ಚು ತೀವ್ರ ಮತ್ತು ದೊಡ್ಡದಾಗಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇರಾನ್ ಇತ್ತೀಚೆಗೆ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಕತಾರ್, ಸೌದಿ ಅರೇಬಿಯಾ ಸೇರಿದಂತೆ ಮೂರು ಪ್ರಮುಖ ವಾಣಿಜ್ಯ ತೈಲ ಹಡಗುಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿತ್ತು. ಇರಾನ್ ಮತ್ತು ಅಮೆರಿಕ ನಡುವೆ ಕಳೆದ ತಿಂಗಳಷ್ಟೇ ಏರ್ಪಟ್ಟಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದವನ್ನು ಇರಾನ್ ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಅಮೆರಿಕ ತಿಳಿಸಿದೆ.
ದಕ್ಷಿಣ ಇರಾನ್ನ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕದ ಯುದ್ಧ ವಿಮಾನಗಳು ದಾಳಿ ನಡೆಸಿವೆ. ಇರಾನ್ನ ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ಕಣ್ಗಾವಲು ಕೇಂದ್ರಗಳು, ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ತಾಣಗಳು ಹಾಗೂ ಹಡಗು ವಿರೋಧಿ ಕ್ರೂಸ್ ಕ್ಷಿಪಣಿ ಮತ್ತು ಡ್ರೋನ್ ಉಡಾವಣಾ ಕೇಂದ್ರಗಳ ಮೇಲೆ ಅಮೆರಿಕ ವಾಯುದಾಳಿ ನಡೆಸುತ್ತಿದೆ. ಘಟನೆಯಲ್ಲಿ ಹಲವು ಮೀನುಗಾರಿಕೆ ಹಾಗೂ ವಾಣಿಜ್ಯ ಹಡಗುಕಟ್ಟೆಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ.