ವಾಷಿಂಗ್ಟನ್, ಸೆ.10(Daijiworld News/SS): ಹೊಸದಿಲ್ಲಿ ಮತ್ತು ಇಸ್ಲಾಮಾಬಾದ್ ನಡುವಿನ ಭಿನ್ನಾಭಿಪ್ರಾಯ ನಿವಾರಣೆಗೆ ಸಹಾಯ ಮಾಡಲು ನಾನು ಸಿದ್ಧ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿ ಕೇಳಿಕೊಂಡಿದ್ದರು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಕಾಶ್ಮೀರ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷವಿರುವುದು ನಿಮಗೆಲ್ಲ ಗೊತ್ತಿದೆ. ಕಳೆದೆರಡು ವಾರಗಳಿಂದ ಬೇಗುದಿಯ ಬಿಸಿ ಸ್ವಲ್ಪ ತಗ್ಗಿದೆ ಎಂಬುದು ನನ್ನ ಅನಿಸಿಕೆ. ಎರಡು ದೇಶಗಳೊಂದಿಗೆ ನಾನು ಉತ್ತಮ ಸಂಬಂಧವನ್ನು ಕಾಯ್ದುಕೊಂಡಿದ್ದು, ಅವರೊಪ್ಪಿದರೆ ಸಹಾಯಕ್ಕೆ ನಾನು ಸಿದ್ಧ ಎಂದು ಹೇಳಿದ್ದಾರೆ.
ಫ್ರಾನ್ಸ್ನಲ್ಲಿ ನಡೆದ ಜಿ- 7 ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಳಿಕ ಇದೇ ಮೊದಲ ಬಾರಿಗೆ ಕಾಶ್ಮೀರ ವಿಷಯದ ಬಗ್ಗೆ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಜುಲೈ ತಿಂಗಳಲ್ಲಿ ಅಮೆರಿಕಾಕ್ಕೆ ತಮ್ಮ ಚೊಚ್ಚಲ ಭೇಟಿಯಲ್ಲಿ ಇಮ್ರಾನ್, ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ವಹಿಸುವಂತೆ ಕೋರಿದ್ದರು. ಆಗ ತಕ್ಷಣ ಪ್ರತಿಕ್ರಿಯಿಸಿದ್ದ ಭಾರತ ಕಾಶ್ಮೀರ, ಭಾರತದ ಆಂತರಿಕ ವಿಷಯ, ಮೂರನೆಯವರ ಪ್ರವೇಶ ಸ್ವೀಕಾರಾರ್ಹವಲ್ಲ ಎಂದು ಹೇಳಿತ್ತು. ಇದೀಗ ಮತ್ತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಶ್ಮೀರ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.