ಕೊಲಂಬೊ, ಆ. 13 (DaijiworldNews/AK): ಶ್ರೀಲಂಕಾದ ಜಲಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 9 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಲೈಮನ್ನಾರ್ನ ಉರುಮಲೈ ಪಾಯಿಂಟ್ ಬಳಿ ಬುಧವಾರ ರಾತ್ರಿ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಬಂಧಿತ 9 ಭಾರತೀಯ ಮೀನುಗಾರರನ್ನು ಮತ್ತು ಮೀನುಗಾರಿಕಾ ಹಡಗನ್ನು ಮುಂದಿನ ಕಾನೂನು ನಡಾವಳಿಗಳಿಗಾಗಿ ಮನ್ನಾರ್ನ ಮೀನುಗಾರಿಕಾ ಇನ್ಸ್ಪೆಕ್ಟರ್ಗೆ ಹಸ್ತಾಂತರಿಸಲಾಗುವುದು ಎಂದು ಶ್ರೀಲಂಕಾ ನೌಕಾಪಡೆಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೆ, ಮನ್ನಾರ್ ದ್ವೀಪ ಮತ್ತು ರಾಮಸೇತು (ಆಡಮ್ಸ್ ಬ್ರಿಡ್ಜ್) ಸುತ್ತಲಿನ ಮನ್ನಾರ್ ಕೊಲ್ಲಿಯ ಪರಿಸರ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದಲ್ಲಿ ಅತ್ಯಂತ ಆದ್ಯತೆಯ ನಿಕಟ ಜೀವವೈವಿಧ್ಯತೆ ಮತ್ತು ಸಂರಕ್ಷಣಾ ವಲಯವೆಂದು ಗುರುತಿಸಲಾಗಿದೆ. ಹಾಗಾಗಿ ಇದು ನಿರ್ದಿಷ್ಟ ಮೀನುಗಾರಿಕಾ ನಿರ್ವಹಣೆ ಮತ್ತು ಪರಿಸರ ಸಂರಕ್ಷಣಾ ನಿಯಮಗಳಿಗೆ ಒಳಪಟ್ಟಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜುಲೈ ಕೊನೆಯ ವಾರದಲ್ಲೂ ಶ್ರೀಲಂಕಾ ನೌಕಾಪಡೆಯು ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 9 ಭಾರತೀಯ ಮೀನುಗಾರರನ್ನು ಬಂಧಿಸಿ, ಅವರ ದೋಣಿಯನ್ನು ವಶಪಡಿಸಿಕೊಂಡಿತ್ತು. ಅಧಿಕೃತ ದತ್ತಾಂಶಗಳ ಪ್ರಕಾರ, ಈ ವರ್ಷ ಏಪ್ರಿಲ್ 15ರ ವೇಳೆಗೆ 128 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದ್ದು, 18 ಹಡಗುಗಳನ್ನು ಶ್ರೀಲಂಕಾ ನೌಕಾಪಡೆ ವಶಪಡಿಸಿಕೊಂಡಿದೆ.