ಜಕಾರ್ತ, ಆ. 15 (DaijiworldNews/AK): ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಮಾಹಿತಿ ಪ್ರಕಾರ, ಇಂದು (ಆ.15) ಬೆಳಿಗ್ಗೆ ಸ್ಥಳೀಯ ಕಾಲಮಾನ 5:58ರ ಸುಮಾರಿಗೆ ಇಂಡೋನೇಷ್ಯಾದ ಪೂರ್ವ ನುಸಾ ತೇಂಗಾರಾ ಪ್ರಾಂತ್ಯದ ಎಂಡೆ ನಗರದಿಂದ 68 ಕಿ.ಮೀ ಉತ್ತರ-ವಾಯುವ್ಯಕ್ಕೆ ಇದರ ಕೇಂದ್ರಬಿಂದುವಿದೆ. ಅಲ್ಲದೇ ಪೂರ್ವ ಇಂಡೋನೇಷ್ಯಾದ ಫ್ಲೋರೆಸ್ ದ್ವೀಪಕ್ಕೂ ಇದು ಅಪ್ಪಳಿಸಿದೆ.
ಪ್ರಬಲ ಭೂಕಂಪಕ್ಕೆ ಓರ್ವ ಪುರುಷ ಹಾಗೂ ಓರ್ವ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಭೂಕಂಪದ ಬೆನ್ನಲ್ಲೇ ಇಂಡೋನೇಷ್ಯಾದ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಫ್ಲೋರೆಸ್ ದ್ವೀಪದ ಮೌಮೇರೆ ಪಟ್ಟಣದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಭೂಕಂಪದ ಪರಿಣಾಮ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭೂಕಂಪದಿಂದಾಗಿ ಹಾನಿಗೊಳಗಾದ ಕಟ್ಟಡಗಳ ದೃಶ್ಯಗಳು ವೈರಲ್ ಆಗಿದೆ.