ನ್ಯೂಯಾರ್ಕ್, ಆ. 17 (DaijiworldNews/AK): ಐದು ವರ್ಷದ ಹಿಂದೆ (2021 ರಲ್ಲಿ) ಕೋವಿಡ್ ಪೀಕ್ ಇದ್ದಾಗ ಝೂಮ್ ಕಾಲ್ ಮೂಲಕ ಏಕಾಏಕಿ 900 ಉದ್ಯೋಗಿಗಳನ್ನು ವಜಾಗೊಳಿಸಿದ ಘಟನೆ ಹಲವರಿಗೆ ನೆನಪಿರಬಹುದು. ಆ ಕೆಲಸ ಮಾಡಿದ್ದು ಭಾರತ ಮೂಲದ ವ್ಯಕ್ತಿ ವಿಶಾಲ್ ಗರ್ಗ್. ಅಮೆರಿಕದ ‘ಬೆಟರ್ ಹೋಮ್ & ಫೈನಾನ್ಸ್’ ಕಂಪನಿಯ ಸಿಇಒ ಆಗಿದ್ದಾಗ ಒಂದು ವಿಡಿಯೋ ಕಾಲ್ನಲ್ಲಿ 900 ಉದ್ಯೋಗಿಗಳೆಲ್ಲರನ್ನೂ ಟರ್ಮಿನೇಟ್ ಮಾಡಿದ್ದರು.

ಇದೀಗ ಆ ಕಂಪನಿಯ ಮಂಡಳಿ ಸದಸ್ಯರೇ ಸೇರಿಕೊಂಡು ವಿಶಾಲ್ ಗರ್ಗ್ ಅವರನ್ನು ಕೆಲಸದಿಂದ ಟರ್ಮಿನೇಟ್ ಮಾಡಿದ್ದಾರೆ. ವಿಶಾಲ್ ಗರ್ಗ್ ಅವರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ಸ್ವಭಾವ ಮತ್ತು ನಂಬಿಕಾರ್ಹತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಕಂಪನಿಯ ಆಡಳಿತ ಮಂಡಳಿಯು ಅವರನ್ನು ಹುದ್ದೆಯಿಂದ ವಜಾಗೊಳಿಸಲು ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡಿದೆ.
ವಿಶಾಲ್ ಗರ್ಗ್ ನಾಯಕತ್ವದಲ್ಲಿ ಕಂಪನಿಯು 2022 ರಿಂದ $1.5 ಬಿಲಿಯನ್ (ಸುಮಾರು ₹14,000 ಕೋಟಿಗೂ ಹೆಚ್ಚು) ನಿವ್ವಳ ನಷ್ಟ ಅನುಭವಿಸಿದೆ. ಅಲ್ಲದೆ ಕಂಪನಿಯ ಶೇರು ಮೌಲ್ಯವು ಶೇ. 90 ಕ್ಕಿಂತ ಹೆಚ್ಚು ಕುಸಿತ ಕಂಡಿದೆ.
2021 ರ ಡಿಸೆಂಬರ್ನಲ್ಲಿ ಕ್ರಿಸ್ಮಸ್ ಹಬ್ಬಕ್ಕೂ ಕೆಲ ದಿನಗಳ ಮುನ್ನ ವಿಶಾಲ್ ಗಾರ್ಗ್ ಕೇವಲ 3 ನಿಮಿಷಗಳ ಝೂಮ್ ವೆಬಿನಾರ್ನಲ್ಲಿ 900 ಕ್ಕೂ ಹೆಚ್ಚು ಉದ್ಯೋಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿದ್ದರು. ಈ ಘಟನೆ ಜಾಗತಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಬೆಟರ್ ಹೋಮ್ ಸಂಸ್ಥೆಯು ಡೇನಿಯಲ್ ಲೂಯಿಸ್ ಎಂಬುವವರನ್ನು ಹಂಗಾಮಿ ಸಿಇಒ ಆಗಿ ನೇಮಿಸಿದೆ. ಈ ಡೇನಿಯಲ್ ಅವರನ್ನು ಕಂಪನಿಯ ಒಳಗೆ ಬಿಟ್ಟುಕೊಂಡಿದ್ದೇ ವಿಶಾಲ್ ಗರ್ಗ್. ಝೂಮ್ ಕಾಲ್ ಘಟನೆ ಬಳಿಕ ಕಂಪನಿಯ ಇಮೇಜ್ಗೆ ಧಕ್ಕೆಯಾದಾಗ ಡೇನಿಯಲ್ ಅವರು ಸಾರ್ವಜನಿಕವಾಗಿ ಕಂಪನಿ ಬಗ್ಗೆ ಸಕಾರಾತ್ಮಕವಾಗಿ ಮಾತನಾಡುತ್ತಿದ್ದರು. ಹೋಗುತ್ತಾ ಹೋಗುತ್ತಾ ವಿಶಾಲ್ ಗರ್ಗ್ ಅವರ ವಿಶ್ವಾಸ ಕುದುರಿಸಿದ್ದರು. ಬಳಿಕ ಅವರನ್ನು ನಿರ್ದೇಶಕರ ಮಂಡಳಿಗೆ ಸೇರಿಸಿಕೊಳ್ಳಲಾಯಿತು. ನೇಮಕವಾಗಿ ಒಂದು ವಾರಕ್ಕೆ ಇತರ ನಿರ್ದೇಶಕರನ್ನು ಲೂಯಿಸ್ ಅವರು ವಿಶಾಲ್ ಗರ್ಗ್ ಉಚ್ಚಾಟನೆಗೆ ಮನವೊಲಿಸಿಬಿಟ್ಟಿದ್ದರು.
ಇದೀಗ ವಿಶಾಲ್ ಗರ್ಗ್ ತಮ್ಮನ್ನು ವಜಾಗೊಳಿಸಿರುವುದನ್ನು ಪ್ರಶ್ನಿಸಿ ಪ್ರಸಿದ್ಧ ವಕೀಲರನ್ನು ನೇಮಿಸಿಕೊಂಡು ಕಾನೂನು ಸಮರ ಆರಂಭಿಸಿದ್ದಾರೆ.