ವಾಷಿಂಗ್ಟನ್, ಆ. 18 (DaijiworldNews/AA): ಭಾರತದ ಚುನಾವಣಾ ವ್ಯವಸ್ಥೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. ಅಮೆರಿಕದ ಚುನಾವಣೆಗಳಲ್ಲಿ ಪೌರತ್ವ ಮತ್ತು ಮತದಾರರ ಗುರುತಿನ ಪುರಾವೆಗಳನ್ನು ಕಡ್ಡಾಯಗೊಳಿಸುವ ಸೇವ್ ಅಮೆರಿಕಾ ಕಾಯ್ದೆಯನ್ನು ಅಂಗೀಕರಿಸಬೇಕೆಂದು ಅವರು ಹೇಳಿದ್ದಾರೆ.

ಈ ಕುರಿತು ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಮಾನ್ಯವಾದ ಫೋಟೊ ಐಡಿ ಇಲ್ಲದೇ ನೀವು ಅಮೆರಿಕದಲ್ಲಿ ಚುನಾವಣೆಗಳನ್ನು ನಡೆಸಲು ಹೇಗೆ ಸಾಧ್ಯ ಎಂದು ನಮ್ಮ ಆಡಳಿತವನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕೇಳಿದ್ದರು ಎಂದು ಪ್ರಸ್ತಾಪಿಸಿದ್ದಾರೆ.
"ಭಾರತದ ಕಳೆದ ಚುನಾವಣೆಯಲ್ಲಿ 646,000,000 ಮತದಾರರಿದ್ದರು. ಶೇ. 1 ಕ್ಕಿಂತ ಕಡಿಮೆ ಜನರು ಮೇಲ್ ಮೂಲಕ ಮತ ಚಲಾಯಿಸಿದ್ದಾರೆ. ಅಲ್ಲಿ ಪ್ರತಿಯೊಬ್ಬ ಮತದಾರರು ಮಾನ್ಯ ಫೋಟೊ ಗುರುತಿನ ದಾಖಲೆಯನ್ನು ಹೊಂದಿರಲೇಬೇಕು" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.