ನೈರೋಬಿ, ಆ. 20 (DaijiworldNews/TA): ಮಧ್ಯ ಕೀನ್ಯಾದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಈಕ್ವೆಡಾರ್ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥ, ಅವರ ಪತ್ನಿ ಹಾಗೂ ಐವರು ಅಮೆರಿಕದ ಪ್ರಜೆಗಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.

ನೈರೋಬಿಯ ಉತ್ತರ ಭಾಗದಲ್ಲಿರುವ ಸಾಂಬುರು ಕೌಂಟಿಯ ಲೊಯಿಸಾಬಾ ವನ್ಯಜೀವಿ ಅಭಯಾರಣ್ಯದಿಂದ ಹೆಲಿಕಾಪ್ಟರ್ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಈ ದುರ್ಘಟನೆ ಸಂಭವಿಸಿದೆ. ಹೆಲಿಕಾಪ್ಟರ್ನಲ್ಲಿ ಓರ್ವ ಪೈಲಟ್ ಹಾಗೂ ಆರು ಮಂದಿ ಪ್ರವಾಸಿಗರಿದ್ದರು. ಘಟನೆಯಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರಲ್ಲಿ ಈಕ್ವೆಡಾರ್ ರಾಷ್ಟ್ರೀಯ ಗುಪ್ತಚರ ಕೇಂದ್ರದ ಮುಖ್ಯಸ್ಥರಾಗಿದ್ದ 42 ವರ್ಷದ ಮೈಕೆಲ್ ಸೆನ್ಸಿ-ಕಾಂಟುಗಿ ಹಾಗೂ ಅವರ ಪತ್ನಿ ಸ್ಟೆಫನಿ ಸೇರಿದ್ದಾರೆ. ಮೈಕೆಲ್ ಅವರು ಈಕ್ವೆಡಾರ್ ಅಧ್ಯಕ್ಷ ಡೇನಿಯಲ್ ನೊಬೊವಾ ಅವರ ಆಪ್ತರಾಗಿದ್ದರು. ಮೃತರಾದ ಐವರು ಅಮೆರಿಕನ್ ಪ್ರಜೆಗಳಲ್ಲಿ ಸ್ಪ್ಯಾನಿಷ್ ಪ್ರಸಾರ ಸಂಸ್ಥೆ ‘ಟೆಲಿಮುಂಡೋ’ ಹಾಗೂ ‘ಎನ್ಬಿಸಿ ಯುನಿವರ್ಸಲ್’ನ ಹಿರಿಯ ವ್ಯವಸ್ಥಾಪಕ ಜೋಸ್ ಆಲ್ಬರ್ಟೊ ಸುವಾರೆಜ್ ಕೂಡ ಇದ್ದರು ಎಂದು ತಿಳಿದುಬಂದಿದೆ. ಸಮುದ್ರ ಮಟ್ಟದಿಂದ ಸುಮಾರು 2,000 ಮೀಟರ್ ಎತ್ತರದಲ್ಲಿರುವ ಪ್ರಸಿದ್ಧ ಪಾದಯಾತ್ರೆ ತಾಣ ಮೌಂಟ್ ಓಲೋಲೋಕ್ವೆ ಸಮೀಪ ಹೆಲಿಕಾಪ್ಟರ್ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲಿ ದಟ್ಟ ಕಪ್ಪು ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿತ್ತು.
ಕಡಿದಾದ ಬೆಟ್ಟಗಳು, ಬಂಡೆ ಪ್ರದೇಶ ಹಾಗೂ ಕತ್ತಲಿನ ಕಾರಣ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಮೃತದೇಹಗಳನ್ನು ಹೊರತೆಗೆಯುವ ಕಾರ್ಯವನ್ನು ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಲಿಕಾಪ್ಟರ್ ಪತನಕ್ಕೆ ಪ್ರತಿಕೂಲ ಹವಾಮಾನ ಕಾರಣವೇ ಅಥವಾ ತಾಂತ್ರಿಕ ದೋಷವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಕೀನ್ಯಾ ನಾಗರಿಕ ವಿಮಾನಯಾನ ಪ್ರಾಧಿಕಾರ (KCAA) ಹಾಗೂ ವಿಮಾನ ಅಪಘಾತ ತನಿಖಾ ವಿಭಾಗ (AAID) ತನಿಖೆ ಆರಂಭಿಸಿವೆ.
ಕೀನ್ಯಾದ ವನ್ಯಜೀವಿ ಸಫಾರಿ ಹಾಗೂ ಪರ್ವತ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಪ್ರವಾಸಗಳು ಜನಪ್ರಿಯವಾಗಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂತಹ ಅಪಘಾತಗಳು ಆತಂಕ ಮೂಡಿಸುತ್ತಿವೆ. ಕಳೆದ ಮಾರ್ಚ್ನಲ್ಲೂ ಸಂಸದರೊಬ್ಬರು ಸೇರಿದಂತೆ ಆರು ಮಂದಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದರು.