ಇಸ್ಲಾಮಾಬಾದ್, ಆ. 21 (DaijiworldNews/AK): ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಿಟಿಐ ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರನ್ನು ಶುಕ್ರವಾರ ಬೆಳಗಿನ ಜಾವ ಇಸ್ಲಾಮಾಬಾದ್ನ ಶಿಫಾ ಖಾಸಗಿ ಆಸ್ಪತ್ರೆಗೆ ಆರೋಗ್ಯ ತಪಾಸಣೆಗಾಗಿ ಕರೆದೊಯ್ಯಲಾಗಿತ್ತು. ಆದರೆ ತಪಾಸಣೆ ಮುಗಿದ ಕೆಲವೇ ಗಂಟೆಗಳಲ್ಲಿ ಅವರನ್ನು ಮತ್ತೆ ರಾವಲ್ಪಿಂಡಿಯ ಅಡಿಯಾಲ ಜೈಲಿಗೆ ಕರೆತರಲಾಗಿದೆ.

ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಖಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ಪಿಟಿಐ ನಾಯಕ ಜುಲ್ಫಿ ಬುಖಾರಿ ದೃಢಪಡಿಸಿದ್ದಾರೆ. ಆದರೆ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವುದನ್ನು ವಿರೋಧಿಸಿ ಪಾಕಿಸ್ತಾನ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಪರಿಶೀಲನಾ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇಮ್ರಾನ್ ಖಾನ್ ಅವರ ಆರೋಗ್ಯ ಜೈಲಿನಲ್ಲಿ ತೀವ್ರವಾಗಿ ಕ್ಷೀಣಿಸಿದೆ ಮತ್ತು ಅವರು ಜೈಲಿನಲ್ಲೇ ನಿಧನರಾಗಿದ್ದಾರೆ ಎಂಬ ಸುಳ್ಳು ವದಂತಿಗಳು ಹಬ್ಬಿದ್ದವು. ಆದರೆ ಆಸ್ಪತ್ರೆಗೆ ಅವರು ಜೀವಂತವಾಗಿ ಬಂದ ದೃಶ್ಯಗಳನ್ನು ಕಂಡು ಆಸ್ಪತ್ರೆಯ ಹೊರಗೆ ಜಮಾಯಿಸಿದ್ದ ಬೆಂಬಲಿಗರು ಸಮಾಧಾನಗೊಂಡರು.
2018 ರಿಂದ2022 ರವರೆಗೆ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್, ಸೇನೆಯೊಂದಿಗಿನ ಭಿನ್ನಾಭಿಪ್ರಾಯದ ಬಳಿಕ ಅವಿಶ್ವಾಸ ನಿರ್ಣಯದಲ್ಲಿ ಅಧಿಕಾರ ಕಳೆದುಕೊಂಡಿದ್ದರು. ನಂತರ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಹಾಗೂ ಅವರ ಪತ್ನಿ ಬುಷ್ರಾ ಬೀಬಿಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, 2023 ರಿಂದ ಅವರು ಅಡಿಯಾಲ ಜೈಲಿನಲ್ಲಿದ್ದಾರೆ.
ಖಾನ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಅವಕಾಶ ನೀಡಿರುವುದು ಕಾನೂನುಬಾಹಿರ ಎಂದು ಪ್ರಧಾನಿ ರಾಜಕೀಯ ಸಲಹೆಗಾರ ರಾಣಾ ಸನಾವುಲ್ಲಾ ವಾದಿಸಿದ್ದು, ನ್ಯಾಯಾಲಯದ ಆದೇಶ ಮಾರ್ಪಡಿಸಲು ಕೋರಿದ್ದಾರೆ.
ಇಮ್ರಾನ್ ಖಾನ್ ಅವರ ಜೀವಕ್ಕೆ ಜೈಲಿನಲ್ಲಿ ಅಪಾಯವಿದೆ ಎಂದು ಆರೋಪಿಸಿರುವ ಪಿಟಿಐ ಪ್ರಧಾನ ಕಾರ್ಯದರ್ಶಿ ಸಲ್ಮಾನ್ ಅಕ್ರಮ್ ರಾಜಾ, ಸರ್ಕಾರ ತನ್ನ ಅರ್ಜಿಯನ್ನು ಹಿಂಪಡೆದು ಸುಪ್ರೀಂ ಕೋರ್ಟ್ ಆದೇಶದಂತೆ ಅವರನ್ನು ಶಿಫಾ ಆಸ್ಪತ್ರೆಯಲ್ಲೇ ಇರಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.