ಅಲಾಸ್ಕಾ, ಆ. 21 (DaijiworldNews/TA): ಪಶ್ಚಿಮ ಅಲಾಸ್ಕಾದ ದೂರದ ಹಾಗೂ ಹಿಮಭರಿತ ಪ್ರದೇಶದಲ್ಲಿ ಎಂಟು ಮಂದಿಯನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ವಿಮಾನವೊಂದು ಪತನಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. ವಿಮಾನದಲ್ಲಿ ಇಬ್ಬರು ಪೈಲಟ್ಗಳು ಹಾಗೂ ಆರು ಮಂದಿ ಪ್ರಯಾಣಿಕರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ಅಲಾಸ್ಕಾ ಮುಖ್ಯಸ್ಥ ಕ್ಲಿಂಟ್ ಜಾನ್ಸನ್ ಅವರ ಮಾಹಿತಿ ಪ್ರಕಾರ, ಆಂಕಾರೇಜ್ನಿಂದ ಹೊರಟಿದ್ದ ವಿಮಾನವು ಕೇಪ್ ನ್ಯೂವೆನ್ಹ್ಯಾಮ್ ಲಾಂಗ್ ರೇಂಜ್ ರಾಡಾರ್ ಸೈಟ್ ಸಮೀಪಿಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿದೆ. ವಿಮಾನ ಪತನದ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಅಲಾಸ್ಕಾ ರಕ್ಷಣಾ ಸಮನ್ವಯ ಕೇಂದ್ರ , ಯುಎಸ್ ಕೋಸ್ಟ್ ಗಾರ್ಡ್ ಸಹಕಾರದೊಂದಿಗೆ ತುರ್ತು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಅಪಘಾತ ಸಂಭವಿಸಿರುವ ಪ್ರದೇಶ ಅತ್ಯಂತ ದುರ್ಗಮವಾಗಿದ್ದು, ಹಿಮ ಮತ್ತು ಪ್ರತಿಕೂಲ ಭೌಗೋಳಿಕ ಪರಿಸ್ಥಿತಿಗಳಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಸವಾಲು ಎದುರಾಗಿದೆ.
ಅಪಘಾತದ ಸ್ಥಳದ ದುರ್ಗಮ ಪರಿಸ್ಥಿತಿಯಿಂದಾಗಿ ವಿಮಾನದಲ್ಲಿದ್ದವರ ಸ್ಥಿತಿ ಕುರಿತು ತಕ್ಷಣಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ರಕ್ಷಣಾ ತಂಡಗಳು ಸ್ಥಳವನ್ನು ಪತ್ತೆಹಚ್ಚಿ ಪ್ರಯಾಣಿಕರು ಹಾಗೂ ಸಿಬ್ಬಂದಿಯ ಬಗ್ಗೆ ಮಾಹಿತಿ ಕಲೆಹಾಕಲು ಕಾರ್ಯಾಚರಣೆ ಮುಂದುವರಿಸಿವೆ. ಅಲಾಸ್ಕಾದ ಕರಾವಳಿ ಹಾಗೂ ರಾಡಾರ್ ಸೈಟ್ಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಮಪಾತ, ದಟ್ಟ ಮಂಜು ಮತ್ತು ಕ್ಷಿಪ್ರ ಹವಾಮಾನ ಬದಲಾವಣೆ ಸಾಮಾನ್ಯವಾಗಿದ್ದು, ಸಣ್ಣ ಪ್ರಯಾಣಿಕ ಹಾಗೂ ಚಾರ್ಟರ್ ವಿಮಾನಗಳ ಹಾರಾಟಕ್ಕೆ ನಿರಂತರ ಸವಾಲು ಎದುರಾಗುತ್ತದೆ.
ವಿಮಾನ ಪತನಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಪ್ರತಿಕೂಲ ಹವಾಮಾನ ಪರಿಸ್ಥಿತಿಯೇ ಕಾರಣವೇ ಎಂಬುದನ್ನು ಪತ್ತೆಹಚ್ಚಲು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮತ್ತು NTSB ತನಿಖೆ ಆರಂಭಿಸಿವೆ. ವಿಮಾನದ ಹಾರಾಟದ ದಾಖಲೆಗಳು, ಹವಾಮಾನ ಪರಿಸ್ಥಿತಿ ಹಾಗೂ ಅಪಘಾತದ ಸ್ಥಳದಲ್ಲಿನ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕದ ವಿವಿಧ ಭಾಗಗಳಲ್ಲಿ ನಡೆದ ಹಲವು ವಿಮಾನ ದುರಂತಗಳ ಬೆನ್ನಲ್ಲೇ ಅಲಾಸ್ಕಾದ ಈ ಘಟನೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ತನಿಖೆಯ ಬಳಿಕವೇ ಅಪಘಾತದ ನಿಖರ ಕಾರಣ ತಿಳಿದುಬರಲಿದೆ.