ನೇಪಿಡಾವ್, ಆ. 21 (DaijiworldNews/AA): ಮ್ಯಾನ್ಮಾರ್ನ ಕೇಂದ್ರ ಭಾಗದಲ್ಲಿರುವ ಸಾಗೈಂಗ್ ಪ್ರದೇಶದ ಬೌದ್ಧ ವಿಹಾರದ ಮೇಲೆ ಶುಕ್ರವಾರ ಸೇನಾ ಪಡೆಗಳು ನಡೆಸಿದ ವಾಯುದಾಳಿಯಲ್ಲಿ 14 ಮಂದಿ ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ.

"ಸ್ಥಳೀಯ ಕಾಲಮಾನ ಪ್ರಕಾರ ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮ್ಯಾನ್ಮಾರ್ನ 2ನೇ ಅತಿದೊಡ್ಡ ನಗರವಾದ ಮಂಡಲೆಯಿಂದ ಸುಮಾರು 75 ಕಿಲೋಮೀಟರ್ ಪಶ್ಚಿಮದಲ್ಲಿರುವ ಮ್ಯಾಔಂಗ್ ಟೌನ್ಶಿಪ್ನ ಸ್ವೆಲ್ ಲೆ ಓ ಗ್ರಾಮದಲ್ಲಿ ಈ ದಾಳಿ ನಡೆದಿದೆ" ಎಂದು ಮ್ಯಾಔಂಗ್ ಟೌನ್ಶಿಪ್ನ ಸಿವಿಲ್ ಡಿಫೆನ್ಸ್ ಆ್ಯಂಡ್ ಸೆಕ್ಯುರಿಟಿ ಆರ್ಗನೈಸೇಶನ್ ನ ವಕ್ತಾರ ನ್ವೇ ಓ ಮಾಹಿತಿ ನೀಡಿದ್ದಾರೆ
"ಜನರು ಧ್ಯಾನ ಶಿಬಿರದಲ್ಲಿ ಪಾಲ್ಗೊಂಡಿದ್ದ ವೇಳೆ ಯುದ್ಧವಿಮಾನವೊಂದು ಗ್ರಾಮದ ಬೌದ್ಧ ವಿಹಾರದ ಆವರಣದೊಳಗೆ ಪ್ರವೇಶಿಸಿ ಬಾಂಬ್ ಹಾಕಿದೆ. ದಾಳಿಯಲ್ಲಿ ಮೂರು ಮಹಿಳೆಯರು ಸೇರಿದಂತೆ ಒಟ್ಟು 14 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ" ಎಂದು ಅವರು ಹೇಳಿದ್ದಾರೆ.
ಮೃತರ ಗುರುತು ಹಾಗೂ ಗಾಯಗೊಂಡವರ ಪ್ರಸ್ತುತ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸಂಘರ್ಷಪೀಡಿತ ಮ್ಯಾನ್ಮಾರ್ನಲ್ಲಿ ವಾಯುದಾಳಿಗಳಿಂದ ನಾಗರಿಕರ ಸಾವುನೋವು ಹೆಚ್ಚುತ್ತಿರುವ ನಡುವೆಯೇ ಈ ಘಟನೆ ನಡೆದಿದೆ.