ಇಸ್ಲಾಮಾಬಾದ್, ಸೆ.14 (DaijiworldNews/AA): ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಉಗ್ರ ಮಸೂದ್ ಅಜರ್ ಸುಳಿವು ನೀಡಿದವರಿಗೆ 70 ಲಕ್ಷ ಪಾಕಿಸ್ತಾನಿ ರೂಪಾಯಿ ನೀಡುವುದಾಗಿ ಪಾಕಿಸ್ತಾನ ಘೋಷಿಸಿದೆ.

ದೇಶದ ಫೆಡರಲ್ ತನಿಖಾ ಸಂಸ್ಥೆಯು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ನನ್ನು ತನ್ನ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಿತ್ತು. ಇದೀಗ ಈತನ ಸುಳಿವು ನೀಡುವವರಿಗೆ ಘೋಷಿಸಿದ್ದ ಬಹುಮಾನವನ್ನು 20 ಲಕ್ಷ ಪಾಕಿಸ್ತಾನಿ ರೂಪಾಯಿಗಳಷ್ಟು ಹೆಚ್ಚಿಸಿ 70 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿದೆ.
ಅಜರ್, ಪಾಕ್ ಮೂಲದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಹಾಗೂ ಮುಖ್ಯಸ್ಥ. ಕಳೆದ ಎರಡು ದಶಕಗಳಲ್ಲಿ ಭಾರತದ ವಿರುದ್ಧ ಅತ್ಯಂತ ಗಂಭೀರ ದಾಳಿಗಳನ್ನು ನಡೆಸಿದ ಆರೋಪ ಈ ಸಂಘಟನೆಯ ಮೇಲಿದೆ. ಈ ಭಯೋತ್ಪಾದಕ ಗುಂಪು ಪಾಕಿಸ್ತಾನದಿಂದ ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ.
ಅಜರ್ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಘೋಷಿಸಿದೆ. 2001ರ ಸಂಸತ್ ಭವನದ ಮೇಲಿನ ದಾಳಿ, 2008ರ ಮುಂಬೈ ದಾಳಿ, 2016ರ ಪಠಾಣ್ಕೋಟ್ ವಾಯುನೆಲೆ ಮೇಲಿನ ದಾಳಿ ಮತ್ತು 2019ರ ಪುಲ್ವಾಮಾ ಬಾಂಬ್ ದಾಳಿ ಸೇರಿದಂತೆ ಹಲವು ದಾಳಿಗಳೊಂದಿಗೆ ಅವನ ಭಯೋತ್ಪಾದಕ ಸಂಘಟನೆಗೆ ನಂಟು ಇದೆ ಎಂದು ವರದಿಯಾಗಿದೆ.