ನ್ಯೂಯಾರ್ಕ್, ಸೆ.15 (DaijiworldNews/AA): ಹಳಿಯ ಮೇಲೆ ಕುಳಿತಿದ್ದ ಭಾರತೀಯ ಮೂಲದ ಯುವತಿ ಮತ್ತು ಆಕೆಯ ನೇಪಾಳಿ-ಅಮೆರಿಕನ್ ಸ್ನೇಹಿತ ರೈಲು ಡಿಕ್ಕಿಯಾಗಿ ಮೃತಪಟ್ಟ ದಾರುಣ ಘಟನೆ ನ್ಯೂಯಾರ್ಕ್ ಸಬ್ವೇ ನಿಲ್ದಾಣದಲ್ಲಿ ಸಂಭವಿಸಿದೆ.

ನ್ಯೂಜೆರ್ಸಿಯ ಡೇಟನ್ ನಿವಾಸಿ ಮಲೈಕಾ ಚಿತ್ರೆ(24) ಮತ್ತು ಸೇರೆವಿಲ್ಲೆ ನಿವಾಸಿ ನವಂ ಕೌಲ್ ಮೃತ ದುರ್ದೈವಿಗಳು. ಇವರಿಬ್ಬರು ಸ್ಪ್ರಿಂಗ್ ಸ್ಟ್ರೀಟ್ ಸಬ್ವೇ ನಿಲ್ದಾಣದ ರೈಲ್ವೆ ಹಳಿಯ ಮೇಲೆ ಕುಳಿತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಇಬ್ಬರಲ್ಲಿ ಒಬ್ಬರು ಮೊದಲು ಹಳಿಗೆ ಬಿದ್ದಿದ್ದಾರೆ ಅಥವಾ ಇಳಿದಿದ್ದಾರೆ. ಅವರನ್ನು ರಕ್ಷಿಸಲು ಮತ್ತೊಬ್ಬರು ಹಳಿಗೆ ಇಳಿದಿರಬಹುದು ಎಂದು ಶಂಕಿಸಲಾಗಿದೆ. ಹಳಿಯ ಮೇಲೆ ಇಬ್ಬರೂ ಕುಳಿತಿರುವುದನ್ನು ಕಂಡು ರೈಲು ಚಾಲಕಿ ತುರ್ತು ಬ್ರೇಕ್ ಹಾಕಲು ಯತ್ನಿಸಿದರಾದರೂ, ಅದಾಗಲೇ ರೈಲು ಅವರ ಮೇಲೆ ಹರಿದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಘಟನೆಯ ಬಳಿಕ ರೈಲಿನಲ್ಲಿದ್ದ ಸುಮಾರು 100 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮಲೈಕಾ ಚಿತ್ರೆ 'ಅಕಾಡಿಯಾ ಫಾರ್ಮಾಸ್ಯುಟಿಕಲ್ಸ್'ನಲ್ಲಿ ಕಾರ್ಯಾಚರಣೆ ತಜ್ಞೆಯಾಗಿ ಹಾಗೂ ನವಂ ಕೌಲ್ 'ಬ್ಲೂಮ್ಬರ್ಗ್'ನಲ್ಲಿ ಹಣಕಾಸು ದತ್ತಾಂಶ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಬ್ಬರೂ ರಟ್ಜರ್ಸ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾಗಿದ್ದರು ಎಂದು ತಿಳಿದುಬಂದಿದೆ.