ಲಂಡನ್, ಸೆ.15 (DaijiworldNews/TA): ಭಾರತದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಗಂಗಾರತಿಯ ವೈಭವ ಇದೀಗ ವಿದೇಶದಲ್ಲೂ ಮೊಳಗಿದೆ. ಪವಿತ್ರ ಗಂಗಾನದಿ ತೀರದಲ್ಲಿ ನಡೆಯುವ ಗಂಗಾರತಿಯನ್ನು ಲಂಡನ್ನ ಥೇಮ್ಸ್ ನದಿ ತೀರದಲ್ಲಿ ಇದೇ ಮೊದಲ ಬಾರಿಗೆ ವೈಭವದಿಂದ ನೆರವೇರಿಸಲಾಗಿದೆ.

ಸೆಪ್ಟೆಂಬರ್ 13ರಂದು ಲಂಡನ್ನ ಗ್ರೀನ್ವಿಚ್ನಲ್ಲಿರುವ ಥೇಮ್ಸ್ ನದಿ ತೀರದಲ್ಲಿ ನಡೆದ ಈ ಅಪರೂಪದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಚಿನ್ಮಯ ಮಿಷನ್ನ 75ನೇ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ‘ಟೋಟಲಿ ಥೇಮ್ಸ್’ ಉತ್ಸವದ ಸಹಯೋಗದೊಂದಿಗೆ ಚಿನ್ಮಯ ಮಿಷನ್ ಯುಕೆ ಕಾರ್ಯಕ್ರಮವನ್ನು ಆಯೋಜಿಸಿತ್ತು.
‘ಥೇಮ್ಸ್ನಲ್ಲಿ ಗಂಗಾರತಿ: ಬೆಳಕಿನ ಸಮರ್ಪಣೆ’ ಎಂಬ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮವು ಆಧ್ಯಾತ್ಮಿಕ ಕೃತಜ್ಞತೆ, ಪರಿಸರ ಸಂರಕ್ಷಣೆ ಮತ್ತು ಏಕತೆಯ ಸಂದೇಶವನ್ನು ಸಾರಿತು. ಭಾರತೀಯ ಸಂಸ್ಕೃತಿಯ ವಿಶಿಷ್ಟ ಆಚರಣೆಯನ್ನು ಲಂಡನ್ನಲ್ಲಿ ಕಂಡು ಸಾವಿರಾರು ಜನರು ಸಂಭ್ರಮದಿಂದ ಪಾಲ್ಗೊಂಡರು. ಈ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲೂ ವಾರ್ಷಿಕವಾಗಿ ಮುಂದುವರಿಸುವ ಸಾಧ್ಯತೆಯಿದೆ.
ಚಿನ್ಮಯ ಮಿಷನ್ನ ಜಾಗತಿಕ ಮುಖ್ಯಸ್ಥ ಸ್ವಾಮಿ ಸ್ವರೂಪಾನಂದ ಮಾತನಾಡಿ, ಲಂಡನ್ನ ಹೃದಯಭಾಗದಲ್ಲಿ ಜನರನ್ನು ಒಂದೇ ಆಧ್ಯಾತ್ಮಿಕ ವೇದಿಕೆಯಲ್ಲಿ ಒಗ್ಗೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು ಎಂದು ಹೇಳಿದರು. ತಾಯಿ ಗಂಗೆಯ ಸ್ಫೂರ್ತಿ, ಭಾರತೀಯ ಸಂಪ್ರದಾಯ, ಸಂಸ್ಕೃತಿ ಮತ್ತು ಜ್ಞಾನದ ಧಾರೆಯನ್ನು ಲಂಡನ್ನಲ್ಲಿ ಸ್ಮರಿಸುತ್ತಾ, ಥೇಮ್ಸ್ ನದಿಯಲ್ಲಿ ಗಂಗೆಯನ್ನು ಆವಾಹಿಸಿ ಅದರ ದಿವ್ಯತೆ ಮತ್ತು ಸೌಂದರ್ಯವನ್ನು ನೆನಪಿಸಿಕೊಳ್ಳುವ ಕಲ್ಪನೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದ ವಿಶೇಷತೆಯೆಂದರೆ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಗಂಗಾರತಿ ವೇಳೆ ಯಾವುದೇ ವಸ್ತುವನ್ನು ನದಿಗೆ ಹಾಕಲಾಗಿಲ್ಲ. ದೀಪಗಳನ್ನು ನೀರಿನಲ್ಲಿ ತೇಲಿಬಿಡುವ ಬದಲು ನದಿಯ ದಡದಲ್ಲಿಯೇ ಇರಿಸಿ ಆರತಿ ನೆರವೇರಿಸಲಾಯಿತು. ಈ ಮೂಲಕ ಭಾರತೀಯ ಸಂಪ್ರದಾಯವನ್ನು ಆಚರಿಸುವುದರ ಜತೆಗೆ ಥೇಮ್ಸ್ ನದಿಯ ಸ್ವಚ್ಛತೆ ಮತ್ತು ಪರಿಸರಕ್ಕೂ ಯಾವುದೇ ಹಾನಿಯಾಗದಂತೆ ಕಾರ್ಯಕ್ರಮ ನಡೆಸಲಾಯಿತು.
1951ರಲ್ಲಿ ಸ್ಥಾಪನೆಯಾದ ಚಿನ್ಮಯ ಮಿಷನ್, ಸ್ವಾಮಿ ಚಿನ್ಮಯಾನಂದರಿಂದ ಪ್ರೇರಿತವಾದ ಜಾಗತಿಕ ಆಧ್ಯಾತ್ಮಿಕ ಸಂಸ್ಥೆಯಾಗಿದೆ. ಇಂದು ವಿಶ್ವದಾದ್ಯಂತ 350ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿರುವ ಸಂಸ್ಥೆ ಆಧ್ಯಾತ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಯುಕೆಯಲ್ಲಿಯೂ ಮಕ್ಕಳಿಂದ ಹಿಡಿದು ಯುವಜನರು, ಕುಟುಂಬಗಳು ಹಾಗೂ ಹಿರಿಯ ನಾಗರಿಕರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಇನ್ನು 1997ರಿಂದ ಟ್ರಸ್ಟ್ ಮೂಲಕ ನಡೆಯುತ್ತಿರುವ ‘ಟೋಟಲಿ ಥೇಮ್ಸ್’ ಉತ್ಸವವು ಕಲೆ, ಪರಿಸರ, ಪರಂಪರೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಮೂಲಕ ಥೇಮ್ಸ್ ನದಿಯನ್ನು ಸಂಭ್ರಮಿಸುತ್ತದೆ. ಈ ಬಾರಿ ಗಂಗಾರತಿ ಕಾರ್ಯಕ್ರಮದ ಮೂಲಕ ಭಾರತೀಯ ಆಧ್ಯಾತ್ಮಿಕ ಪರಂಪರೆ ಮತ್ತು ಥೇಮ್ಸ್ ನದಿಯ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಬೆಸೆಯಲಾಗಿದೆ.