ವಾಷಿಂಗ್ಟನ್, ಸೆ.16 (DaijiworldNews/AA): ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲವನ್ನು ಖರೀದಿ ಮಾಡುವ ಭಾರತ ಸೇರಿದಂತೆ ಪ್ರಮುಖ ದೇಶಗಳ ಮೇಲೆ ಶೇ. 100 ರಷ್ಟು ಸುಂಕ ವಿಧಿಸಲು ಅಮೆರಿಕದ ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಲಾಗಿದೆ.

ಒಂದು ವೇಳೆ ಕಾನೂನಾಗಿ ಜಾರಿಗೆ ಬಂದರೆ ತೈಲ ಖರೀದಿಸುವ ದೇಶಗಳ ಮೇಲೆ 100% ತೆರಿಗೆ ವಿಧಿಸುವ ಸಂಪೂರ್ಣ ಅಧಿಕಾರ ಅಮೆರಿಕಕ್ಕೆ ಸಿಗಲಿದೆ. ಯುಎಸ್ ಸೆನೆಟರ್ ಲಿಂಡ್ಸೆ ಗ್ರಾಹಮ್ ಅವರ ನೆನಪಿನಲ್ಲಿ ಇದಕ್ಕೆ ಲಿಂಡ್ಸೆ ಒ. ಗ್ರಾಹಮ್ ಸ್ಯಾಂಕ್ಷನಿಂಗ್ ರಷ್ಯಾ ಆಂಡ್ ಇರಾನ್ ಆಕ್ಟ್ 2026 ಎಂದು ಹೆಸರಿಡಲಾಗಿದೆ.
ಈ ಮಸೂದೆಯು ಈಗಾಗಲೇ ಅಮೆರಿಕದ ಸೆನೆಟ್ನಲ್ಲಿ ಭಾರಿ ಬಹುಮತದೊಂದಿಗೆ ಅಂಗೀಕಾರ ಪಡೆದಿದೆ. ಈ ಮಸೂದೆಯು ಬುಧವಾರ ಹೌಸ್ನಲ್ಲಿ ಅಂತಿಮ ಮತದಾನಕ್ಕೆ ಬರುವ ನಿರೀಕ್ಷೆಯಿದೆ.
ರಷ್ಯಾದಿಂದ ತೈಲ ಖರೀದಿಸುವ ಪ್ರಮುಖ ದೇಶಗಳಾದ ಭಾರತ, ಚೀನಾ, ಟರ್ಕಿ, ಹಂಗೇರಿ, ಸ್ಲೋವಾಕಿಯಾ, ಅಜೆರ್ಬೈಜಾನ್, ಯುಎಇ, ಸಿಂಗಾಪುರ್, ಕಜಾಕಿಸ್ತಾನ್ ಮತ್ತು ಕಿರ್ಗಿಸ್ತಾನ್ ದೇಶಗಳನ್ನು ಈ ಪಟ್ಟಿಯಲ್ಲಿ ಹೆಸರಿಸಲಾಗಿದೆ ಎಂದು ಡೆಮಾಕ್ರಟಿಕ್ ಸಂಸದ ಸ್ಟೆನಿ ಹೋಯರ್ ತಿದ್ದುಪಡಿ ಮಂಡಿಸಿದ್ದಾರೆ.
ಉಕ್ರೇನ್ ವಿರುದ್ಧದ ಯುದ್ಧಕ್ಕೆ ತೈಲ ವ್ಯಾಪಾರದಿಂದ ಬರುವ ಹಣವನ್ನೇ ರಷ್ಯಾ ಬಳಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಹೀಗಾಗಿ ರಷ್ಯಾದಿಂದ ತೈಲ ಖರೀದಿಸುತ್ತಿರುವ ದೇಶಗಳನ್ನು ಅಮೆರಿಕ ಗುರಿಯಾಗಿಸಿಕೊಂಡು ಈ ಕಾನೂನು ಜಾರಿಗೆ ತರಲು ಮುಂದಾಗಿದೆ. ಒಂದು ವೇಳೆ ಈ ಮಸೂದೆ ಕಾನೂನಾದರೆ, ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಅಮೆರಿಕ 100% ಸುಂಕ ವಿಧಿಸಬಹುದಾಗಿದೆ.
ಸದ್ಯ ಈ ನಿಯಮವು ತಕ್ಷಣವೇ ಜಾರಿಗೆ ಬಂದಿಲ್ಲ. ಈ ಮಸೂದೆಯು ಮೊದಲು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಅಂಗೀಕಾರವಾದ ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದಕ್ಕೆ ಸಹಿ ಹಾಕಿ ಕಾನೂನು ಜಾರಿಗೆ ತರಬೇಕು.