ಇಸ್ಲಾಮಾಬಾದ್, ಸೆ.14(Daijiworld News/SS): ಜಮ್ಮು-ಕಾಶ್ಮೀರದ ವಿಚಾರದಲ್ಲಿ ಭಾರತದ ವಿರುದ್ಧ ಬಲಪ್ರದರ್ಶನ ನಡೆಸಲು ಇಮ್ರಾನ್ ಖಾನ್ ಕರೆಕೊಟ್ಟಿದ್ದ ಸಮಾವೇಶಕ್ಕೆ ಪಿಒಕೆ ಜನರು ಬಹಿಷ್ಕರಿಸಿರುವುದರಿಂದ ಮತ್ತೊಮ್ಮೆ ಪಾಕ್ ಮುಖಭಂಗ ಅನುಭವಿಸುವಂತಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್'ನಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶ ಫ್ಲಾಪ್ ಶೋ ಎಂದು ಪಿಒಕೆ ಸಾಮಾಜಿಕ ಕಾರ್ಯಕರ್ತರು ಬಹಿರಂಗವಾಗಿ ಹೇಳಿಕೆ ನೀಡಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್'ಗೆ ತೀವ್ರ ಮುಖಭಂಗವಾಗಿದೆ.
ಈ ಕುರಿತು ಮಾತನಾಡಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸಾಮಾಜಿಕ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ, ಮುಜಾಫರಬಾದ್'ನಲ್ಲಿ ಇಮ್ರಾನ್ ಖಾನ್ ನಡೆಸಿದ ಬೃಹತ್ ಸಮಾವೇಶಕ್ಕೆ ಅಬೋಟ್ಟಾಬಾದ್ ಮತ್ತು ರಾವಲ್ಪಿಂಡಿಯಿಂದ ಜನರನ್ನು ಬಲವಂತವಾಗಿ ಕರೆತಂದಿರುವುದಾಗಿ ಆರೋಪಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಮ್ರಾನ್ ಆಯೋಜಿಸಿದ್ದ ಸಮಾವೇಶ ಜನರಿಲ್ಲದೆ ಖಾಲಿ, ಖಾಲಿಯಾಗಿತ್ತು. ಈ ಪ್ರದೇಶದಲ್ಲಿ ಪಾಕ್ ಸರಕಾರ ನಡೆಸಿದ್ದ ದೌರ್ಜನ್ಯ ಖಂಡಿಸಿ ಸಮಾವೇಶವನ್ನು ಬಹಿಷ್ಕರಿಸಲು ನಿರ್ಧರಿಸಿದ್ದರು. ಇದನ್ನು ಗಮನಿಸಿದ ಅಧಿಕಾರಿಗಳು ಅಬೋಟ್ಟಾಬಾದ್ ಮತ್ತು ರಾವಲ್ಪಿಂಡಿಯಿಂದ ಲಾರಿಗಳಲ್ಲಿ ಜನರನ್ನು ಕರೆತಂದಿದ್ದರು ಎಂದು ಹೇಳಿದ್ದಾರೆ.