ಲಂಡನ್, ಸೆ.22 (DaijiworldNews/AK): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆಯುವ ಭಾರತದ ಪ್ರಯತ್ನಕ್ಕೆ ನಾಲ್ಕು ಯುರೋಪಿಯನ್ ರಾಷ್ಟ್ರಗಳು ಬೆಂಬಲ ನೀಡಿವೆ. ಇದರಿಂದ ಭಾರತ ಶೀಘ್ರದಲ್ಲೇ ಮುಂದಿನ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಲಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವರೊಂದಿಗೆ ನಡೆದ ಮೊದಲ ಸಭೆಯಲ್ಲಿ, ‘ವಿಸೆಗ್ರಾಡ್ ಗ್ರೂಪ್’ನ (V4) 4 ಸದಸ್ಯ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿವೆ. ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಮತ್ತು ಜೆಕ್ ಗಣರಾಜ್ಯಗಳು ಭಾರತದ ಪ್ರಯತ್ನವನ್ನ ಒಟ್ಟಾಗಿ ಬೆಂಬಲಿಸಿವೆ ಎಂದು ಸ್ಲೋವಾಕಿಯಾದ ವಿದೇಶಾಂಗ ಸಚಿವ ಜುರಾಜ್ ಬ್ಲಾನಾರ್ ಹೇಳಿದರು.
ಗ್ಲೋಬಲ್ ಸೌತ್ (ಜಾಗತಿಕ ದಕ್ಷಿಣ) ಭಾಗವಾಗಿರುವ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಂದಿನ ಸೂಪರ್ ಪವರ್ ಆಗಿರುವ ಭಾರತವು ವಿಶ್ವಸಂಸ್ಥೆಯ ಭದ್ರಯಾ ಮಂಡಳಿಯಲ್ಲಿ ಶಾಶ್ವತ ಸದಸ್ಯನಾಗಿ ಸ್ಥಾನ ಪಡೆಯಬೇಕು ಎನ್ನುವ ವಿಷಯವನ್ನ V4 ದೇಶಗಳಾದ ನಾವೆಲ್ಲರೂ ಒಪ್ಪುತ್ತೇವೆ ಎಂದು ಸಚಿವ ಜುರಾಜ್ ಬ್ಲಾನಾರ್ ಹೇಳಿದ್ದಾರೆ.
ಇನ್ನೂ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಈ ಬಗ್ಗೆ ಮಾತನಾಡಿ, V4 ಮತ್ತು ಭಾರತದ ವಿದೇಶಾಂಗ ಸಚಿವರ ನಡುವಿನ ಈ ಮೊದಲ ಸಭೆ ʻಒಂದು ಹೊಸ ಐತಿಹಾಸಿಕ ಸಂದರ್ಭ ಎಂದು ಬಣ್ಣಿಸಿದರು.