ಕೌಲಾಲಂಪುರ್, ಸೆ.23 (DaijiworldNews/AK):ಮಲೇಷ್ಯಾ ಸರ್ಕಾರ ಭಾರತೀಯ ಪ್ರವಾಸಿಗರಿಗೆ ನೀಡಿರುವ 30 ದಿನಗಳ ವೀಸಾ-ಮುಕ್ತ ಪ್ರವೇಶ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು, ನಕಲಿ ಏಜೆಂಟರ ಮಾತನ್ನು ನಂಬಿ ಉದ್ಯೋಗ ಹುಡುಕಲು ತೆರಳುತ್ತಿರುವ ಭಾರತೀಯರಿಗೆ ಕೌಲಾಲಂಪುರದಲ್ಲಿರುವ ಭಾರತೀಯ ಹೈಕಮಿಷನ್ ಎಚ್ಚರಿಕೆಯನ್ನು ನೀಡಿದೆ.

ಪ್ರವಾಸಿ ವೀಸಾ ಅಥವಾ ವೀಸಾ ರಹಿತ ಪ್ರವೇಶದ ಮೂಲಕ ತೆರಳಿ ಕೆಲಸ ಮಾಡುವುದು ಮಲೇಷ್ಯಾದ ವಲಸೆ ಕಾಯ್ದೆಯಡಿ ಗಂಭೀರ ಅಪರಾಧವಾಗಿದ್ದು, ಅಂತಹವರು ಬಂಧನ, ಜೈಲು ಶಿಕ್ಷೆ ಹಾಗೂ ದೇಶದಿಂದ ಗಡೀಪಾರು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಮಲೇಷ್ಯಾದಲ್ಲಿ ಉತ್ತಮ ಉದ್ಯೋಗ ಕೊಡಿಸುವುದಾಗಿ ನಂಬಿಸುವ ವಂಚಕ ಏಜೆಂಟರು ಭಾರತೀಯ ಯುವಕರನ್ನು ವೀಸಾ-ಮುಕ್ತ ಸೌಲಭ್ಯದಡಿ ಮಲೇಷ್ಯಾಕ್ಕೆ ಕಳುಹಿಸುತ್ತಿದ್ದಾರೆ. 30 ದಿನಗಳ ಅವಧಿ ಮುಗಿದ ನಂತರ ಅಂತಹವರು ದೇಶದಲ್ಲಿ ಅಕ್ರಮವಾಗಿ ನೆಲೆಸಬೇಕಾಗುತ್ತದೆ . ಪರಿಣಾಮವಾಗಿ ಅವರು ಅಕ್ರಮ ವಲಸಿಗರಾಗಿ ಗುರುತಿಸಿಕೊಂಡು, ಸ್ಥಳೀಯ ಮಾಫಿಯಾಗಳಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಜತೆಗೆ ಯಾವುದೇ ವೃತ್ತಿಪರ ಹಕ್ಕುಗಳು, ವೈದ್ಯಕೀಯ ವಿಮೆ ಅಥವಾ ಕನಿಷ್ಠ ವೇತನದ ಸುರಕ್ಷತೆ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ.
ಅಧಿಕೃತ ಕೆಲಸದ ವೀಸಾ ಕಡ್ಡಾಯ: ಮಲೇಷ್ಯಾದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಭಾರತದಿಂದಲೇ ಮಾನ್ಯತೆ ಪಡೆದ ವರ್ಕ್ ಪರ್ಮಿಟ್ ಅಥವಾ ‘ರೆಫರೆನ್ಸ್ನೊಂದಿಗೆ ವೀಸಾ’ ಪಡೆದುಕೊಳ್ಳಬೇಕು. 30 ದಿನಗಳ ವೀಸಾ-ಮುಕ್ತ ಸೌಲಭ್ಯವು ಕೇವಲ ಪ್ರವಾಸೋದ್ಯಮ ಮತ್ತು ಕುಟುಂಬ/ಸ್ನೇಹಿತರನ್ನು ಭೇಟಿ ಮಾಡಲು ಮಾತ್ರ ಸೀಮಿತವಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಕೆಲಸದ ವೀಸಾವನ್ನಾಗಿ ಪರಿವರ್ತಿಸಲು ಬರುವುದಿಲ್ಲ.
ವಲಸೆ ಅಧಿಕಾರಿಗಳ ತಪಾಸಣೆಯಲ್ಲಿ ಕಿರುಕುಳ ಅಥವಾ ವಾಪಸ್ ಕಳುಹಿಸುವುದನ್ನು ತಪ್ಪಿಸಲು ಪ್ರವಾಸಿಗರು ಕೆಳಗಿನ ನಿಯಮಗಳನ್ನು ಪಾಲಿಸಬೇಕು:
- ಪಾಸ್ಪೋರ್ಟ್ ಸಿಂಧುತ್ವ: ಪಾಸ್ಪೋರ್ಟ್ ಕನಿಷ್ಠ 6 ತಿಂಗಳ ಮಾನ್ಯತೆ ಹೊಂದಿರಬೇಕು.
- ಮುಂಗಡವಾಗಿ ಬುಕ್ ಮಾಡಲಾದ ರಿಟರ್ನ್ ವಿಮಾನ ಟಿಕೆಟ್, ಹೋಟೆಲ್ ಬುಕಿಂಗ್ ಪ್ರತಿ ಮತ್ತು ಪ್ರವಾಸ ವೆಚ್ಚ ಭರಿಸಲು ಅಗತ್ಯವಿರುವಷ್ಟು ಹಣದ ವಿವರ (ಬ್ಯಾಂಕ್ ಬ್ಯಾಲೆನ್ಸ್/ನಗದು) ಇರಬೇಕು.
- ಮಲೇಷ್ಯಾಕ್ಕೆ ಪ್ರಯಾಣಿಸುವ ದಿನಾಂಕಕ್ಕಿಂತ ಕನಿಷ್ಠ 3 ದಿನಗಳ ಮೊದಲು ಆನ್ಲೈನ್ನಲ್ಲಿ ‘ಮಲೇಷ್ಯಾ ಡಿಜಿಟಲ್ ಆಗಮನ ಕಾರ್ಡ್’ (MDAC) ಭರ್ತಿ ಮಾಡಿ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ.