ಇಸ್ಲಾಬಾಮಾದ್, ಸೆ 15 (Daijiworld News/RD): ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿದ ಬಳಿಕ ಅಲ್ಲಿನ ಜನರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದು, ವಿದ್ಯಾರ್ಥಿಗಳು ಸುರಕ್ಷಿತವಾಗಿ ಶಾಲೆಗೆ ಹೋಗಲು ವಿಶ್ವಸಂಸ್ಥೆ ನೆರವಾಗಬೇಕು ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಹಾಗೂ ಪಾಕಿಸ್ತಾನಿ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿ ಕೇಳಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ’ಕಾಶ್ಮೀರಿಗಳ ಧ್ವನಿಗಳನ್ನು ಕೇಳಬೇಕಾಗಿದೆ, ಅವರ ಮಕ್ಕಳು ಸುರಕ್ಷಿತವಾಗಿ ಮರಳಿ ಶಾಲೆಗೆ ಹೋಗುವಂತಾಗಬೇಕು, ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮುಂದಾಗಬೇಕೆಂದು ಕೇಳಿಕೊಳ್ಳುವುದಾಗಿ ಮಲಾಲ ಟ್ವೀಟ್ ಮಾಡಿದ್ದಾರೆ.
ನಿಷೇಧಾಜ್ಞೆಯ ಬಳಿಕ ಕಾಶ್ಮೀರದಲ್ಲಿ ಸಂವಹನ ವ್ಯವಸ್ಥೆ ಸ್ಥಗಿತಗೊಂಡಿದ್ದು, ಅಲ್ಲಿನ ಜನರು ಹೊರ ಜಗತ್ತಿದೊಂದಿಗೆ ಸಂಪರ್ಕ ಸಾಧಿಸದಂತಾಗಿದೆ. ಅವರ ಧ್ವನಿಯನ್ನು ಕೇಳದಂತಾಗಿದೆ ಎಂದು ಅವರು ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಮಕ್ಕಳು, ಸಾಮಾನ್ಯ ಜನರು ಸೇರಿದಂತೆ 4,000 ಕ್ಕೂ ಅಧಿಕ ಮಂದಿ ಇನ್ನೂ ಜೈಲಿನಲ್ಲಿದ್ದಾರೆ. ಹೆಣ್ಣು ಮಕ್ಕಳು ಮನೆಯಲ್ಲಿ ವಾಸಿಸಲು ಭಯಪಡುವಂತಾಗಿದ್ದು, 40ಕ್ಕೂ ಅಧಿಕ ದಿನಗಳಿಂದಲೂ ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿಲ್ಲ ಎಂಬ ವರದಿಗಳು ಪ್ರಕಟವಾಗಿದ್ದು, ಈ ಬಗ್ಗೆ 22 ವರ್ಷದ ಮಲಾಲ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.