ಇಸ್ಲಾಮಾಬಾದ್, ಸೆ.17(Daijiworld News/SS): ಭಾರತದೊಂದಿಗೆ ಸಂಘರ್ಷ ನಡೆಸುವುದನ್ನು ಬಿಟ್ಟು ತಾಳ್ಮೆ ಪ್ರದರ್ಶಿಸಬೇಕು. ಸದ್ಯ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಭಾರತದ ಜೊತೆ ಹಿಂಬಾಗಿಲ ರಾಜತಾಂತ್ರಿಕ ಮಾತುಕತೆ ನಡೆಸಬೇಕು ಎಂದು ಪ್ರಮುಖ ಮುಸ್ಲಿಂ ರಾಷ್ಟ್ರಗಳ ನಾಯಕರು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್'ಗೆ ಸಲಹೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ.
ಕಾಶ್ಮೀರ ವಿಚಾರದಲ್ಲಿ ಮುಸ್ಲಿಂ ರಾಷ್ಟ್ರಗಳ ಬೆಂಬಲ ಪಡೆಯಲು ವಿಫಲವಾದ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದು ಮಾಡಿದ ಭಾರತದ ನಿರ್ಧಾರವನ್ನು ಜಾಗತಿಕ ವಿಷಯವನ್ನಾಗಿ ಮಾಡಲು ವಿವಿಧ ವೇದಿಕೆಗಳಲ್ಲಿ ಅವಮಾನ ಅನುಭವಿಸಿದ್ದ ಪಾಕಿಸ್ತಾನಕ್ಕೆ ಇದೀಗ ಮುಸ್ಲಿಂ ರಾಷ್ಟ್ರಗಳೂ ಕೂಡ ಬೆಂಬಲ ನೀಡುತ್ತಿಲ್ಲ ಎನ್ನಲಾಗಿದೆ.
ಸೌದಿ ಅರೇಬಿಯಾದ ವಿದೇಶಾಂಗ ಖಾತೆ ರಾಜ್ಯ ಸಚಿವ ಆದಿಲ್ ಅಲ್ ಜುಬೈಲ್, ಯುಎಇ ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್ ಅಲ್ ನಹ್ಯಾನ್ ಅವರು ಪ್ರಧಾನಿ ಇಮ್ರಾನ್ ಖಾನ್, ವಿದೇಶಾಂಗ ಸಚಿವ ಶಾ.ಮೊಹಮ್ಮದ್ ಖುರೇಷಿ, ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತದೊಂದಿಗೆ ಸಂಘರ್ಷ ನಡೆಸುವುದನ್ನು ಬಿಟ್ಟು ತಾಳ್ಮೆ ಪ್ರದರ್ಶಿಸಬೇಕು. ಸದ್ಯ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಭಾರತದ ಜೊತೆ ಹಿಂಬಾಗಿಲ ರಾಜತಾಂತ್ರಿಕ ಮಾತುಕತೆ ನಡೆಸಬೇಕು ಎಂದು ತಿಳಿಸಿವೆ ಎನ್ನಲಾಗಿದೆ.
ತಾವು ಕೇವಲ ಸೌದಿ ಮತ್ತು ಯುಎಇ ಪರವಾಗ ಮಾತ್ರ ಇಲ್ಲಿಗೆ ಆಗಮಿಸಿಲ್ಲ. ಬದಲಾಗಿ ಇತರೆ ಮುಸ್ಲಿಂ ದೇಶಗಳ ಪ್ರತಿನಿಧಿಗಳಾಗಿಯೂ ಆಗಮಿಸಿದ್ದು, ಅವುಗಳ ಅಭಿಪ್ರಾಯವೂ ಇದೇ ಆಗಿದೆ ಎಂದು ಉಭಯ ನಾಯಕರು ಪಾಕಿಸ್ತಾನಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.