ವಿಶ್ವಸಂಸ್ಥೆ, ಅ 13 (Daijiworld News/MSP): ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ವಿಶ್ವಸಂಸ್ಥೆಗೆ, ಭಾರತ ತಾನು ನೀಡಬೇಕಿದ್ದ ಬಾಕಿ ಹಣವನ್ನು ಹಿಂತಿರುಗಿಸಿದೆ. ಈ ಬಗ್ಗೆ ಭಾರತದ ಖಾಯಂ ಪ್ರತಿನಿಧಿ ಸಯೀದ್ ಅಕ್ಬರುದ್ದೀನ್ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.
193 ರಾಷ್ಟ್ರಗಳಿರುವ ವಿಶ್ವಸಂಸ್ಥೆಯಲ್ಲಿ ಈಗಾಗಲೇ 35 ರಾಷ್ಟ್ರಗಳು ಬಾಕಿ ಹಣವನ್ನು ಹಿಂತಿರುಗಿಸಿದ್ದು, ಇನ್ನೂ 64 ರಾಷ್ಟ್ರಗಳು ಬಾಕಿ ಮೊತ್ತ ಪಾವತಿಸಬೇಕಾಗಿದೆ. ಅಧಿಕೃತ ಮಾಹಿತಿಗಳ ಪ್ರಕಾರ ವಿಶ್ವಸಂಸ್ಥೆ ಸುಮಾರು 200 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚಿನ ಹಣಕಾಸಿನ ಕೊರತೆ ಎದುರಿಸುತ್ತಿದೆ.
ಬಾಕಿ ನೀಡಬೇಕಿರುವ ರಾಷ್ಟ್ರಗಳ ಪಟ್ಟಿಯನ್ನು ವಿಶ್ವಸಂಸ್ಥೆ ಇನ್ನಷ್ಟೇ ಪ್ರಕಟಿಸಬೇಕಿದೆ. ಒಂದು ಮೂಲಗಳ ಪ್ರಕಾರ ಅಮೆರಿಕ, ಬ್ರೆಜಿಲ್, ಅರ್ಜೆಂಟೀನ, ಮೆಕ್ಸಿಕೋ, ಇರಾನ್, ವೆನಿಜ್ಯುವೆಲಾ, ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ಇಸ್ರೇಲ್, ಸೌದಿ ಅರೇಬಿಯಾ, ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ ಸೇರಿದಂತೆ ಒಟ್ಟು 64 ರಾಷ್ಟ್ರಗಳು ಬಾಕಿ ಮೊತ್ತವನ್ನು ನೀಡಬೇಕಿದೆ.