ಟೋಕಿಯೊ, ಅ.14(Daijiworld News/SS): ಹಗಿಬಿಸ್ ಚಂಡಮಾರುತಕ್ಕೆ ಜಪಾನ್ ನಲುಗುತ್ತಿದ್ದು, ಈ ಚಂಡಮಾರುತದ ತೀವ್ರತೆಗೆ 25ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಹಗಿಬಿಸ್ ಚಂಡಮಾರುತದಿಂದ ನೂರಾರು ಜನರಿಗೆ ಗಾಯಗಳಾಗಿದ್ದು, ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. 17 ಜನರು ಕಾಣೆಯಾಗಿದ್ದಾರೆ. ಸತತ ಮಳೆಯಿಂದಾಗಿ ಮಧ್ಯ ಜಪಾನ್'ನ ಅನೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ ಎನ್ನಲಾಗಿದೆ.
ಈಗಾಗಲೇ ಮುಂಜಾಗೃತಾ ಕ್ರಮವಾಗಿ ಸುಮಾರು 60 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಈವರೆಗೆ ಸುಮಾರು 70 ಲಕ್ಷ ಜನರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ವಿಮಾನ, ರೈಲು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಚಂಡಮಾರುತದಿಂದಾಗಿ ಜಪಾನ್ನಲ್ಲಿ ನಡೆಯಲಿದ್ದ ರಗ್ಬಿ ವಿಶ್ವಕಪ್ ಪಂದ್ಯಾವಳಿಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಸೇನಾ ಹೆಲಿಕಾಪ್ಟರ್ಗಳು ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ರವಾನಿಸುತ್ತಿವೆ. ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ನದಿಯಲ್ಲಿ ನೀರಿನ ಮಟ್ಟ ಏರುತ್ತಲೇ ಇದೆ ಎಂದು ತುರ್ತು ಸೇವಾ ಅಧಿಕಾರಿ ಯಸುಹಿರೊ ಯಮಗುಚಿ ತಿಳಿಸಿದ್ದಾರೆ.