ನ್ಯೂಯಾರ್ಕ್, ಅ.16(Daijiworld News/SS): ಎಲ್ಲಾ ಸಾರ್ವಜನಿಕ ವಲಯ ಬ್ಯಾಂಕುಗಳಿಗೆ ಚೈತನ್ಯ ತುಂಬುವುದು ತಮ್ಮ ಆದ್ಯತೆಯ ಕೆಲಸವಾಗಿದೆ ಎಂದು ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅವರು ಭಾರತದ ಆರ್ಥಿಕ ನೀತಿಗಳ ಬಗ್ಗೆ ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಮತ್ತು ಆರ್ ಬಿಐ ಹಿಂದಿನ ಗವರ್ನರ್ ರಘುರಾಮ್ ರಾಜನ್ ಅವರ ಅವಧಿಯಲ್ಲಿ ಭಾರತದ ಸಾರ್ವಜನಿಕ ವಲಯ ಬ್ಯಾಂಕುಗಳ ಸ್ಥಿತಿ ಅತ್ಯಂತ ಶೋಚನೀಯ ಹಂತಕ್ಕೆ ತಲುಪಿತ್ತು. ರಘುರಾಮ್ ರಾಜನ್ ಒಬ್ಬ ಆರ್ಥಿಕ ತಜ್ಞರಾಗಿ ಅವರ ಮೇಲೆ ನನಗೆ ಬಹಳ ಗೌರವವಿದೆ. ಭಾರತದ ಆರ್ಥಿಕತೆ ಅತ್ಯಂತ ಉತ್ತಮ ಸ್ಥಿತಿಯಲ್ಲಿರುವಾಗ ಅವರು ಆರ್'ಬಿಐ ಗವರ್ನರ್ ಆಗಿದ್ದರು ಎಂದು ಹೇಳಿದರು.
ರಾಜನ್ ಆರ್ಬಿಐ ಗವರ್ನರ್ ಆಗಿದ್ದ ಸಂದರ್ಭದಲ್ಲಿ ಪ್ರಭಾವಿಶಾಲಿ ಹತ್ತಿರದ ವ್ಯಕ್ತಿಗಳಿಗೆ ಒಂದು ಫೋನ್ ಕರೆ ಮಾಡಿದರೆ ಸಾಕು ಸಾಲ ಸಿಗುತ್ತಿತ್ತು. ಆದರೆ ಅದರಿಂದ ಉಂಟಾದ ತೊಂದರೆಯಿಂದ ಹೊರಬರಲು ಸಾರ್ವಜನಿಕ ವಲಯ ಬ್ಯಾಂಕುಗಳು ಇಂದು ಸರ್ಕಾರದ ಷೇರುಗಳನ್ನು ಅವಲಂಬಿಸಬೇಕಾಗಿ ಬಂದಿದೆ ಎಂದು ತಿಳಿಸಿದರು.