ವಾಷಿಂಗ್ಟನ್, ಅ.17(Daijiworld News/SS): ಇರಾನ್ನಿಂದ ತೈಲ ಸೇರಿ ಪ್ರಮುಖ ಸರಕುಗಳ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದ ಡೊನಾಲ್ಡ್ ಟ್ರಂಪ್ರ ಆಡಳಿತ. ಭಾರತ, ಚೀನಾ ಸೇರಿ ಕೆಲವು ರಾಷ್ಟ್ರಗಳಿಗೆ ಕಳೆದ ಮೇವರೆಗೆ ಈ ದಿಗ್ಬಂಧನದಿಂದ ವಿನಾಯಿತಿ ನೀಡಿತ್ತು. ಮೇ ನಂತರ ತೈಲು ಆಮದು ಮಾಡಿಕೊಂಡರೆ ನಿರ್ಬಂಧ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿತ್ತು.
ಇದೀಗ ಮತ್ತೆ ಇರಾನ್'ನಿಂದ ಕದ್ದುಮುಚ್ಚಿ ತೈಲ ಆಮದು ಮಾಡಿಕೊಳ್ಳುತ್ತಿರುವ ಚೀನಾ ಬಗ್ಗೆ ಅಮೆರಿಕ ಕೆಂಡಾಮಂಡಲವಾಗಿದೆ. ತೈಲ ಸಾಗಿಸುವ ನೌಕೆಗಳ ಜಾಡು ತಿಳಿಯಬಾರದೆಂದು ಹಡಗುಗಳ ಟ್ರಾನ್ಸ್ ಪಾಂಡರ್'ಗಳನ್ನು ಆಫ್ ಮಾಡಿರುವುದಕ್ಕೆ ಕಳವಳ ವ್ಯಕ್ತಪಡಿಸಿದೆ.
ದಿಗ್ಬಂಧನದ ಎಚ್ಚರಿಕೆ ಉಲ್ಲಂಘಿಸಿ ತೈಲ ಆಮದು ಮಾಡಿಕೊಳ್ಳುತ್ತಿರುವುದು ಅಮೆರಿಕದ ಕೋಪಕ್ಕೆ ಕಾರಣವಾಗಿದೆ. ಹೀಗೆ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿ ಹಡಗು ಕಂಪನಿಗಳಿಗೆ ಸಂದೇಶ ಕಳಿಸುತ್ತಿದ್ದೇವೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಇಬ್ಬರು ಅಧಿಕಾರಿಗಳು ಹೇಳಿದ್ದಾರೆ. ‘ಇದು ತೀರಾ ಅಪಾಯಕಾರಿ ಹಾಗೂ ಬೇಜವಾಬ್ದಾರಿ ನಡೆಯಾಗಿದೆ’ ಎಂದವರು ಹೇಳಿದ್ದಾರೆ.