ಅಬುಧಾಬಿ, ಅ 17 (Daijiworld News/MSP): ಭಾರತೀಯ ಮೂಲದ ಅಬುಧಾಬಿಯಲ್ಲಿ ವಾಸವಾಗಿದ್ದ 12 ವರ್ಷದ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದಂದೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಅಬುಧಾಬಿಯಲ್ಲಿ ಭಾರತೀಯ ಶಾಲೆಯ ವಿದ್ಯಾರ್ಥಿನಿಯಾಗಿದ್ದ, ಬಾಲಕಿ ಮಹೀಮಾ ಸುಸಾನ್ ಶಾಜಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಇದು ಆಕೆಯ ಕುಟುಂಬಕ್ಕೆ ಹೊರತುಪಡಿಸಿ ಇನ್ಯಾರಿಗೂ ತಿಳಿದಿರಲಿಲ್ಲ ಎಂದು ಬಾಲಕಿಯ ಸಂಬಂಧಿಕರು ತಿಳಿಸಿದ್ದಾರೆ.
" ಅ. 15 ರ ಮಂಗಳವಾರ ಮಹೀಮಾ ಸುಸಾನ್’ನ ಹನ್ನೆರಡನೇ ಹುಟ್ಟುಹಬ್ಬವಾಗಿತ್ತು. ಅಂದೇ ಆಕೆ ನಮ್ಮನ್ನು ತೊರೆದಿದ್ದಾರೆ. ಅಲ್ ಐನ್ನಲ್ಲಿರುವ ತಾವಮ್ ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿದ್ದಾಳೆ" ಎಂದು ಸಂಬಂಧಿಕರು ತಿಳಿಸಿದ್ದಾರೆ ಎಂದು ಖಲೀಜ್ ಟೈಮ್ಸ್ ಉಲ್ಲೇಖಿಸಿದೆ.
ಕೇರಳದ ಮೂಲದ ಶಾಜಿ ಚಾಕೊ ಡೇನಿಯಲ್ ಮತ್ತು ಸುಸಾನ್ ದಂಪತಿಗಳ ಪುತ್ರಿಯಾಗಿದ್ದ ಮಹೀಮಾ ಅವರ ಕುಟುಂಬ ಕಳೆದ 20 ವರ್ಷಗಳಿಂದ ಅಬುಧಾಬಿಯಲ್ಲಿ ನೆಲೆಸಿತ್ತು. ಮಹಿಮಾ ಅಕ್ಕ ಅಂಜು ಅನ್ನಾ ಶಾಜಿ ಭಾರತದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.
"ಇದು ದುರಂತ ಘಟನೆಯಾಗಿದೆ. ಮೃತದೇಹವನ್ನು ಕೆಡದಂತೆ ಕಾಪಾಡುವ ಪ್ರಕ್ರಿಯೆಗಳು ಶೇಖ್ ಖಲೀಫಾ ಮೆಡಿಕಲ್ ಸಿಟಿಯಲ್ಲಿ ಗುರುವಾರ ನಡೆದ ಬಳಿಕ, ಭಾರತಕ್ಕೆ ತರಲಾಗುವುದು. ಕೊಟ್ಟಾರಕರದ ’ನಲ್ಲಿಲ’ದ ಪ್ಯಾರಿಷ್ ಆಫ್ ಸೇಂಟ್ ಜಾರ್ಜ್ ಜಾಕೋಬೈಟ್ ಸಿರಿಯನ್ ಚರ್ಚ್ ನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ ಎಂದು ಖಲೀಜ್ ಟೈಮ್ಸ್ ಉಲ್ಲೇಖಿಸಿದೆ.